ಬೆಂಗಳೂರು: ಕೊನೆಗೂ ಅಳೆದು ತೂಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ನಾಯಕರಲ್ಲಿ ಭುಗಿಲೆದ್ದಿರುವ ಮೈತ್ರಿ ಮುನಿಸನ್ನೇ ಅಸ್ತ್ರ ಮಾಡಿಕೊಂಡು ದೋಸ್ತಿಗಳಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಯೋಜನೆ ಹೂಡುತ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್, ಹೆಚ್‌ಡಿ ಕುಮಾರಸ್ವಾಮಿ ಮುನಿಸು ತಣಿಸಲು ಮುಂದಾಗಿದೆ. ಜಂಟಿ ಹೋರಾಟಕ್ಕೆ ಯೋಜನೆ ರೂಪಿಸುತ್ತಿದೆ. ಆರು ಕ್ಷೇತ್ರ ಕೇಳಿದರೆ ಕೊಟ್ಟಿದ್ದು ಮೂರೇ. ಬರೀ ಎರಡು ಕ್ಷೇತ್ರಕ್ಕೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ ಎಂದು ದಳಪತಿಗಳು ಸಿಡಿದೆದ್ದಿದ್ದರು. ಟಿಕೆಟ್ ಹಂಚಿಕೆಯಲ್ಲಿ ನಮ್ಮನ್ನ ಕಡೆಗಣಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಲ್ಲಿ ಜೆಡಿಎಸ್ ನಾಯಕರನ್ನೇ ಕೇಳದೇ ಅಭ್ಯರ್ಥಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಅಸಮಾಧಾನ ಹೊರಹಾಕಿದ್ದರು. ಈ ಅಸಮಾಧಾನದ ಕಿಚ್ಚು ತಣಿಸಲು ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ.
ಸದ್ಯ ಚೆನ್ನೈ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಹೆಚ್‌ಡಿ ಕುಮಾರಸ್ವಾಮಿ, ಚೆನ್ನೈಗೆ ಹೋಗುವ ಮುನ್ನ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಹೆಚ್‌ಡಿ ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ಬಿಜೆಪಿ ಚುನವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಮನವೊಲಿಸುವ ಪ್ರಯತ್ನ ಮಾಡಿದ್ದರು. ಯಾವುದೇ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಬೇಡಿ. ತಪ್ಪಾಗಿ ಭಾವಿಸಬೇಡಿ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಭರವಸೆ ನೀಡಿದ್ದಾರೆ.
