ಮೈಸೂರು, ಫೆಬ್ರವರಿ 16, 2026 : ನಗರದ ಕೆ.ಸಿ. ಲೇಔಟ್‌ನಲ್ಲಿ ಕೆರೆ ಜಾಗದ ಒತ್ತುವರಿಯನ್ನು ತೆರವುಗೊಳಿಸಿದ ಜಿಲ್ಲಾಡಳಿತದ ಕ್ರಮವನ್ನು ಶಾಸಕ ಟಿ.ಎಸ್. ಶ್ರೀವತ್ಸ ಅವರು ಶ್ಲಾಘಿಸಿದ್ದಾರೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಅಭಿನಂದನೆ ಸಲ್ಲಿಸಿದರು.
ಕೆರೆ ಒತ್ತುವರಿ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದ ಶಾಸಕ ಶ್ರೀವತ್ಸ ಅವರು, “ಎರಡು ದಿನಗಳಲ್ಲಿ ಒತ್ತುವರಿ ತೆರವುಗೊಳಿಸದಿದ್ದರೆ ನಾನೇ ಖುದ್ದಾಗಿ ನಿಂತು ತೆರವು ಮಾಡುತ್ತೇನೆ” ಎಂದು ಗಡುವು ನೀಡಿದ್ದರು. ಶಾಸಕರ ಈ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತವು ಕಾರ್ಯಾಚರಣೆ ನಡೆಸಿ ಕೆರೆ ಜಾಗವನ್ನು ಮುಕ್ತಗೊಳಿಸಿದೆ.

ಅತಿಕ್ರಮಣಕಾರರ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಪಟ್ಟು
ಕೇವಲ ಒತ್ತುವರಿ ತೆರವುಗೊಳಿಸಿದರೆ ಸಾಲದು ಎಂದು ಅಭಿಪ್ರಾಯಪಟ್ಟ ಶಾಸಕರು, ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ರಮ ಭೂ ಅತಿಕ್ರಮಣಕಾರರನ್ನು ಕೂಡಲೇ ಪತ್ತೆ ಹಚ್ಚಿ, ಮುಂದಿನ 24 ಗಂಟೆಯೊಳಗೆ ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ಕೆರೆ ಜಾಗ ನುಂಗಿದವರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು. ಸರ್ಕಾರಿ ಜಾಗ ಅತಿಕ್ರಮಣ ಮಾಡುವವರಿಗೆ ಇಂತಹ ಕಠಿಣ ಕ್ರಮಗಳು ಎಚ್ಚರಿಕೆಯಾಗಬೇಕು, ಆಗ ಮಾತ್ರ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯ.
ಮೈಸೂರಿನಲ್ಲಿ ಯಾವುದೇ ಸರ್ಕಾರಿ ಜಾಗ ಅತಿಕ್ರಮಣ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಶ್ರೀವತ್ಸ ಇದೇ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
