ಇಂಡಿಗನತ್ತ ಕುಗ್ರಾಮದ ಮೇಲೆ ನಿರ್ಲಕ್ಷ್ಯ । ಮತಗಟ್ಟೆ ಧ್ವಂಸ ಪ್ರಕರಣ
ಚಿಕ್ಕಮಾಳಿಗೆ ಕೊಳ್ಳೇಗಾಲ
ಲೋಕಸಭಾ ಚುನಾವಣಾ ಮತದಾನದ ದಿನದಂದು ಜನಾಕ್ರೋಶಕ್ಕೆ ಮತಗಟ್ಟೆ ಧ್ವಂಸಗೊಂಡ ಮಲೆ ಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಇಂಡಿಗನತ್ತ ಕುಗ್ರಾಮಕ್ಕೆ ಶಾಸಕ, ಸಚಿವರು ಸೌಜನ್ಯಕ್ಕೂ ಭೇಟಿ ನೀಡದಿರುವ ಕುರಿತು ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಾನನದೊಳಗಿರುವ ಇಂಡಿಗನತ್ತ, ಮೆಂದಾರೆ ಸೇರಿ ಇತರ ಕುಗ್ರಾಮಗಳಿಗೆ ಇದುವರೆಗೂ ಸರ್ಕಾರ ಮೂಲ ಸೌಕರ್ಯ ಕಲ್ಪಿಸದ ಬಗ್ಗೆ ಅಸಮಾಧಾನಗೊಂಡು ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದ ನೂರಾರು ಜನರು, ಏ.26 ರಂದು ನೋಡ ನೋಡುತ್ತಿದ್ದಂತೆ ಮತಗಟ್ಟೆ ಕೇಂದ್ರದ ಬಳಿ ಎದುರಾದ ಗೊಂದಲದ ವಾತವರಣದಲ್ಲಿ ದುಡುಕಿ ಮತಗಟ್ಟೆಯನ್ನು ಧ್ವಂಸಗೊಳಿಸಿ, ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಮತಗಟ್ಟೆ ಧ್ವಂಸ ಹಾಗೂ ಹಲ್ಲೆ ಪ್ರಕರಣದಲ್ಲಿ ಪಾಲ್ಗೊಂಡ ನೂರಾರು ಜನರ ವಿರುದ್ಧ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು 46 ಜನರು ಬಂಧನಕ್ಕೊಳಗಾಗಿ ಇದೀಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇತ್ತ ಅನೇಕ ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಗ್ರಾಮದಿಂದ 22 ದಿನಗಳಿಂದಲೂ ಕಣ್ಮರೆಯಾಗಿದ್ದಾರೆ. ಏತನಧ್ಯೆ, ಏನೇನು ತಪ್ಪು ಮಾಡದ ಬಹುತೇಕ ಸಂತ್ರಸ್ತರು ಮಾತ್ರ ಕಂಗಾಲಾಗಿ ದಿನ ದೂಡುವ ಪರಿಸ್ಥಿತಿಯಲ್ಲಿರುವುದು ಇತಿಹಾಸ.
ವಿಪರ್ಯಾಸವೆಂದರೆ, ಹಲವು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಮತ್ತು ವಿವಿದ ಇಲಾಖೆಗಳ ಅಧಿಕಾರಿಗಳಿಗೆ ಈ ಗ್ರಾಮಸ್ಥರು ತಮ್ಮೂರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ನೀಡಿದ್ದರೂ ಸಹ ಯಾವುದೇ ನಿರೀಕ್ಷಿತ ಅಭಿವೃದ್ಧಿ ಕೆಲಸಗಳಾಗಿಲ್ಲ. ಈ ಬಗ್ಗೆ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿರುವುದರಿಂದ ಏ.26 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಬಹಿಷ್ಕಾರ ಹಾಕಿ ಸೋಲಿಗ ಜನಾಂಗದವರು ಮತಗಟ್ಟೆ ಧ್ವಂಸಗೊಳಿಸಿ, ಮತಗಟ್ಟೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಇದು ಕಾನೂನು ಭಾಹಿರವಾದರೂ, ಇವರಲ್ಲಿದ್ದ ದುಗುಡ ಮತ್ತು ಅಸಮಾಧಾನವನ್ನು ಯಾರೊಬ್ಬರೂ ಸಕಾಲದಲ್ಲಿ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ ಹಾಗೂ ಇವರನ್ನು ಮತದಾನಕ್ಕೆ ಮನವೊಲಿಸುವ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಶಾಸಕ, ಸಚಿವರಾದಿಯಾಗಿ ಚುನಾಯಿತ ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎನ್ನಬಹುದು.
ಅಷ್ಟೇ ಏಕೆ, ಘಟನೆ ಬಳಿಕ ಈ ಶೋಷಿತ ಗ್ರಾಮಗಳಿಗೆ ಸೌಜನ್ಯಕ್ಕೂ ಹನೂರು ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕರಾದ ಆರ್.ನರೇಂದ್ರ, ಕೆ.ಎಸ್.ಪರಿಮಳ ನಾಗಪ್ಪ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಭೇಟಿ ನೀಡಿಲ್ಲ. ಮಾನವಿಯತೆ ದೃಷ್ಟಿಯಿಂದಲೂ ಗ್ರಾಮದಲ್ಲಿರುವ ಸಂತ್ರಸ್ತ ಕುಟುಂಬಗಳ ಅಹವಾಲು ಕೇಳಿಲ್ಲ ಎಂಬುದು ಪ್ರಜ್ಞಾವಂತ ನಾಗರೀಕರಲ್ಲಿ ಗರಿಗೆದರಿರುವ ಚರ್ಚೆಯ ಭಾಗವಾಗಿದೆ. ಈ ನಡುವೆ ಜಿಲ್ಲಾಧಿಕಾರಿ, ಜಿ.ಪಂ.ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡವಾಗಿ ಈ ಗ್ರಾಮಗಳಿಗೆ ಒಮ್ಮೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಆದರೆ, ಇದುವವರೆಗೂ ಆ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಪ್ರಯೋಜನಗಳು ದೊರೆತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇಲ್ಲಿನ ಜನರನ್ನು ತಕ್ಷಣದಲ್ಲಿಯೇ ಭೇಟಿಯಾಗಿ ಸಾಂತ್ವಾನ ಹೇಳಲು ಜಿಲ್ಲಾಡಳಿತ ವಿಳಂಬ ಮಾಡಿದ್ದೇಕೆ? ಎಂಬ ಮೂಲ ಪ್ರಶ್ನೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಾರಣ ಎಂಬ ಉತ್ತರಗಳು ಸಿಗುತ್ತಿದೆ. ಈ ಗ್ರಾಮಗಳನ್ನು ಪ್ರತಿನಿಧಿಸುವ ಹನೂರು ಶಾಸಕರು ಅಥವಾ ಇದೇ ಕ್ಷೇತ್ರದ ಮಾಜಿ ಶಾಸಕರಾಗಲೀ, ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರಿನಲ್ಲಿ ಉಳಿಯುವ ಸಮಾಜ ಕಲ್ಯಾಣ ಸಚಿವರಲ್ಲದೇ, ಇವರ ಪುತ್ರ ಚಾ.ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೂಡ ಇದೇ ಕಾರಣಕ್ಕೆ ಇಂದಿಗೂ ಭೇಟಿ ನೀಡಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಆದರೆ, ಇಲ್ಲಿನ ಜನರನ್ನು ಮಾನವಿಯತೆಯ ನೆಲೆಗಟ್ಟಿನಲ್ಲಿ ಭೇಟಿಯಾಗಲು ನೀತಿ ಸಂಹಿತೆ ಅಡ್ಡಿಯಾಗದು. ಸರ್ಕಾರದ ಸೌಲಭ್ಯ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕುರಿತು ಭರವಸೆ ನೀಡಲು ನೀತಿ ಸಂಹಿತೆ ಅಡೆತಡೆಯುಂಟು ಮಾಡಬಹುದು. ಆದರೆ, ಸೌಜನ್ಯಕ್ಕೆ ಇರಲಾರದು ಎಂಬುದು ಇವರೆಲ್ಲರಿಗೆ ತಿಳಿಯದ ವಿಷಯವೇನಲ್ಲ ಎಂಬುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ವಾಸ್ತವತೆಗೆ ಇನ್ನಾದರೂ ಶಾಸಕ, ಸಚಿವರು ಹಾಗೂ ಚುನಾವಣಾಭ್ಯರ್ಥಿ ಮನ್ನಣೆ ನೀಡುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
90 ಹೆಚ್ಚು ಜನ ಸಂತ್ರಸ್ತರು: ಇಂಡಿಗನತ್ತ ಕುಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿನಿಂದನೆ ಸೇರಿ ಮೂರು ಪ್ರಕರಣಗಳು ಮಲೆ ಮಹದೇಶ್ವರ ಬೆಟ್ಟ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ 20 ಮಹಿಳೆಯರನ್ನು ಮೈಸೂರು ಜೈಲಿನಲ್ಲಿ, 25 ಪುರುಷರನ್ನು ಚಾಮರಾಜನಗರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇದೀಗ ಇವರೆಲ್ಲರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಗ್ರಾಮದ 8 ಜನರು ಭಯಪಟ್ಟು ಊರು ಬಿಟ್ಟು ಇಂದಿಗೂ ನಾಪತ್ತೆಯಾಗಿದ್ದಾರೆ. ಆದರೆ, ವಯಸ್ಸಾದ ಸುಮಾರು 15 ಜನ ಹಾಗೂ 70ಕ್ಕೂ ಹೆಚ್ಚು ಮಕ್ಕಳು ಇಂಡಿಗನತ್ತ, ಮೆಂದಾರೆ, ತುಳಸಿಕೆರೆ ಊರಲ್ಲೇ ಭಯಭೀತಿಯಿಂದ ಇದ್ದಾರೆ. ಇವರಿಗೆ ಸೇರಿದ ಜಾನುವಾರುಗಳು ಮೇವು ನೀರು ಇಲ್ಲದೆ ಕಂಗಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೋಟ್:
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುಣಾವಣೆಯ ಮತಗಟ್ಟೆ ದಿನದಂದು ಜನರು ದಿಡೀರ್ ಆಕ್ರೋಶಗೊಂಡು ಮತಗಟ್ಟೆ ಧ್ವಂಸಗೊಳಿಸಿದ ಪ್ರಕರಣದ ಕುರಿತು ನನಗೂ ಬೇಸರವಿದೆ. ಆ ಊರಿನ ಜನರನ್ನು ಸೌಜನ್ಯಕ್ಕಾದರೂ ಭೇಟಿಯಾಗಬೇಕಿತ್ತು ಎಂಬುದನ್ನು ಅಲ್ಲೆಗಳೆಯುವುದಿಲ್ಲ. ಆದರೆ, ಚುನಾವಣಾ ಪೂರ್ವದಲ್ಲಿ ಮತದಾನ ಬಹಿಸ್ಕಾರ ಬೇಡ ಎಂಬ ವಿಚಾರವಾಗಿ ಸಾಕಷ್ಟು ಮನವೊಲಿಕೆ ಮಾಡಲಾಗಿದೆ. ಆಗಿದ್ದರೂ, ಆ ಘಟನೆ ನಡೆಯಿತು. ಈ ನಡುವೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಇದೀಗ ಅಲ್ಲಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ಸಾಕಷ್ಟು ಚಿಂತನೆ ಮಾಡಿದ್ದು, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರೊಟ್ಟಿಗೆ 4 ಗಂಟೆ ಕಾಲ ಶನಿವಾರ ಕಚೇರಿಯಲ್ಲಿ ಕುಳಿತು ಚರ್ಚಿಸಿದ್ದೇನೆ. ಆ ಗ್ರಾಮಗಳಿಗೆ ಒಂದಷ್ಟು ಮೂಲ ಸೌಕರ್ಯ ಕಲ್ಪಿಸಿ ನಂತರ ಭೇಟಿ ನೀಡಬೇಕೆಂದುಕೊಂಡಿದ್ದೇನೆ.-ಎಂ.ಆರ್.ಮಂಜುನಾಥ್, ಜೆಡಿಎಸ್ ಶಾಸಕ, ಹನೂರು ವಿಧಾನಸಭಾ ಕ್ಷೇತ್ರ
18ಕೆಜಿಎಲ್-1
ಫೋಟೋ ಶೀರ್ಷಿಕೆ:
ಮಲೆ ಮಹದೇಶ್ವರ ಬೆಟ್ಟದ ಸಮೀಪ ಇಂಡಿಗನತ್ತ ಗ್ರಾಮದಲ್ಲಿರುವ ಹಳೆಯ ಬಾವಿಯಿಂದ ಜನರು ನೀರು ಸೇದುತ್ತಿರುವುದು.
ಇನ್ನೊಂದು ಚಿತ್ರದಲ್ಲಿ ಇಂಡಿಗನತ್ತ ಗ್ರಾಮ ಸಮೀಪದ ಮೆಂದಾರೆ ಗ್ರಾಮಕ್ಕೆ ನಿವಾಸಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಿರುವುದನ್ನು ಕಾಣಬಹುದು.

