ಮೈಸೂರು, ಫೆಬ್ರವರಿ 17, 2026 :ರಾಜ್ಯದ ಸಚಿವರು ಮತ್ತು ಶಾಸಕರು ಕೈಗೊಳ್ಳುತ್ತಿರುವ ವಿದೇಶ ಪ್ರವಾಸದ ಕುರಿತು ಎಂ.ಎಲ್.ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರು ತಮ್ಮ ಸ್ವಂತ ಖರ್ಚಿನಲ್ಲಿ, ವೈಯಕ್ತಿಕ ಕಾರಣಗಳಿಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ವೈಯಕ್ತಿಕ ಪ್ರವಾಸ ಎಂದ ಮೇಲೆ ಅದನ್ನು ಹೋಗಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಈ ಪ್ರವಾಸಗಳಿಗೂ ರಾಜ್ಯದ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ, “ನನ್ನನ್ನು ಈ ಪ್ರವಾಸಕ್ಕೆ ಯಾರೂ ಕರೆದಿಲ್ಲ, ನಾನು ಹೋಗುತ್ತಿಲ್ಲ” ಎಂದು ಅವರು ನಗುತ್ತಲೇ ಉತ್ತರಿಸಿದರು.
ಸಿಎಂ ಕುರ್ಚಿ ವಿಚಾರ: ಮಗನಿಗೆ ‘ಮಾತಿನ ಮೂಗುದಾರ’ ಹಾಕಿದರಾ ಸಿದ್ದರಾಮಯ್ಯ?
ಕಳೆದ ಕೆಲವು ಸಮಯದಿಂದ ಮುಖ್ಯಮಂತ್ರಿ ಕುರ್ಚಿ ಮತ್ತು ಪವರ್ ಶೇರಿಂಗ್ ವಿಚಾರವಾಗಿ ನೇರವಾಗಿಯೇ ಉತ್ತರಿಸುತ್ತಿದ್ದ ಡಾ. ಯತೀಂದ್ರ ಅವರು ಈಗ ಈ ವಿಚಾರದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮಗನಿಗೆ ಈ ವಿಚಾರದಲ್ಲಿ ಮಾತನಾಡದಂತೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಯತೀಂದ್ರ ಅವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಪವರ್ ಶೇರಿಂಗ್ ಕುರಿತ ಪ್ರಶ್ನೆ ಎದುರಾಗುತ್ತಿದ್ದಂತೆ, “ನಾನು ಈ ಬಗ್ಗೆ ಏನನ್ನೂ ಹೇಳುವುದಿಲ್ಲ, ನವೆಂಬರ್‌ನಿಂದಲೂ ನಾನು ಹೇಳಬೇಕಾದುದನ್ನು ಹೇಳಿದ್ದೇನೆ. ಇನ್ನು ಮುಂದೆ ಈ ವಿಚಾರದಲ್ಲಿ ನನ್ನನ್ನು ಏನನ್ನೂ ಕೇಳಬೇಡಿ” ಎಂದು ಹೇಳಿ ಅಲ್ಲಿಂದ ಹೊರಟರು. ಸಚಿವ ಮಹದೇವಪ್ಪ ಅವರ ‘ನಾಯಿಗಳು’ ಎಂಬ ವಿವಾದಾತ್ಮಕ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಬೇರೆಯವರ ಹೇಳಿಕೆಗೆ ನಾನು ಹೊಣೆಗಾರನಲ್ಲ ಎಂದರು.
ಬಿಜೆಪಿ ಆರೋಪಕ್ಕೆ ಫುಲ್ ಗರಂ: “ಹಾದಿಬೀದಿ ಜನರ ಮಾತಿಗೆ ಉತ್ತರಿಸಲ್ಲ”
ತಮ್ಮನ್ನು ‘ಟ್ರಾನ್ಸ್‌ಫರ್ ಮಿನಿಸ್ಟರ್’ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಡಾ. ಯತೀಂದ್ರ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. “ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾತನಾಡಿದರೆ ಅದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ. ಪ್ರತಾಪ್ ಸಿಂಹ ಮತ್ತು ಯತ್ನಾಳ್ ಅವರಿಗೆ ಮಾಡಲು ಕೆಲಸವಿಲ್ಲ, ಹಾಗಾಗಿ ಏನೇನೋ ಮಾತನಾಡುತ್ತಾರೆ. ಅವರ ಆರೋಪಗಳಿಗೆ ಒಂದಾದರೂ ಪುರಾವೆ ಇದೆಯೇ?” ಎಂದು ಪ್ರಶ್ನಿಸಿದರು. ಬಿಜೆಪಿ ಐಟಿ ಸೆಲ್ ಅವರು ವಿಡಿಯೋಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ, ಅಂತಹ ಕಿಡಿಗೇಡಿಗಳ ಮಾತಿಗೆ ಪ್ರತಿಕ್ರಿಯಿಸಿ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಅವರು ಕಿಡಿಕಾರಿದರು.
