ಬೆಂಗಳೂರು, ಫೆಬ್ರವರಿ 10, 2026 : ಕರ್ನಾಟಕದ ಐಕಾನಿಕ್ ಬ್ರ್ಯಾಂಡ್ ಈಗ ಹೊಸ ರೂಪದೊಂದಿಗೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.ಮಿಲ್ಕ್ ಬ್ಯುಟಿ ನಟಿ ತಮನ್ನಾ ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿ ಆಗಿದ್ದಾರೆ.

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ.
ಇವತ್ತು ಮಂಗಳವಾರ ದಿಂದಲೇ ತಮನ್ನಾ ನೇಮಕಾತಿ ಅಧಿಕೃತವಾಗಿದೆ. ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನ ಹೊಚ್ಚ ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
KSDL ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030 ರ ಹೊತ್ತಿಗೆ 5,000 ಕೋಟಿ ರೂ. ಗಳಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನ ತಲುಪಲು ವ್ಯಾಪಕ ಪ್ರಚಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಷಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನ ನೇಮಿಸಿಕೊಳ್ಳಲಾಗಿದೆ.
ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್ಡಿಎಲ್ ಉತ್ಪನ್ನಗಳ ಪ್ರಸಾರ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿಯ ವಿಷಯವೆಂದರೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಕಟ್ಟುನಿಟ್ಟಿನ ಒಪ್ಪಂದ ಮಾಡಿಕೊಳ್ಳಲಾಗಿದೆ.
