ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ
ಚಿಕ್ಕಬಳ್ಳಾಪುರ : ರಾಪ್ಟ್ರೀಯ ಡೆಂಘೆ ದಿನಾಚರಣೆಯನ್ನು ಮೇ 16 ರಂದು ಸಮುದಾಯದೊಂದಿಗೆ ಸೇರಿ ಡೆಂಘೆ ನಿಯಂತ್ರಿಸೋಣ” ಎಂಬ ಈ ವರ್ಷದ ಘೋಷಣೆಯೊಂದಿಗೆ ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಡೆಂಘೆ ನಿಯಂತ್ರಣ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಡೆಂಘೆ, ಚಿಕೂನ್ ಗೂನ್ ಜ್ವರವು ವೈರಸ್ ನಿಂದ ಉಂಟಾಗುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳಿಂದ ಡೆಂಘೆ, ಚಿಕೂನ್ ಗೂನ್ಯ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಜ್ವರವು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು. ಈಡಿಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಹಗಳಲ್ಲಿ ಉತ್ಪತ್ತಿಯಾಗುತ್ತವೆ. ನಿಮ್ಮ ಮನೆಯಲ್ಲಿ ತೊಟ್ಟಿ, ಬ್ಯಾರಲ್, ಡ್ರಮ್ ಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಪರಿಸರವನ್ನು ಸ್ವಚ್ಚಗೊಳಿಸಿ ಪುನಃ ನೀರು ತುಂಬಿಸಬೇಕು ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಬೇಕು. ಮನೆ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಬೇಕು. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ದ ಗರ್ಭಿಣಿಯರು, ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು. ಡೆಂಗಿ/ಚಿಕುಂಗುನ್ಯ ರೋಗಿಗಳು ಸಹ ತಪ್ಪದೇ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬ ಬಟ್ಟೆ ಧರಿಸಿ ಸೊಳ್ಳೆ ಬತ್ತಿ, ಮುಲಾಮು ದ್ರಾವಣ ಇವುಗಳನ್ನು ಉಪಯೋಗಿಸಬೇಕು. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಚಿಕಿತ್ಸೆಯು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಲಭ್ಯವಿರುತ್ತದೆ.
ಈಡಿಸ್ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರಿಗೆ ಸಹಕಾರ ನೀಡಿ, ಸಲಹೆಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಪ್ರಕಟಣೆ ತಿಳಿಸಿದಾರೆ.
