
ಪ್ರತಿನಿಧಿ ವರದಿ ಚಾಮರಾಜನಗರ
ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳುನಾಡಿನ ತಾಳವಾಡಿ ಪಟ್ಟಣದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.
ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲೂಕು ಕೇಂದ್ರವಾಗಿರುವ ತಾಳವಾಡಿ ಪಟ್ಟಣದಲ್ಲಿ ಮಾರಮ್ಮನ ಜಾತ್ರೆ ಪ್ರಯುಕ್ತ ಮಸೀದಿ ಮುಂಭಾಗ ಕೊಂಡೋತ್ಸವ ನಡೆಯಿತು. ಈ ಮೂಲಕ ಹಿಂದು-ಮುಸ್ಲಿಂ ಸಾಮರಸ್ಯಕ್ಕೆ ತಾಳವಾಡಿ ಸಾಕ್ಷಿಯಾಯಿತು.
ಹಿಂದಿನಿಂದಲೂ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಪಿರ್ಕಾ (ತಾಲೂಕಿನ) 58 ಗ್ರಾಮಗಳು ಸೇರಿದಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರು ಸೇರಿದಂತೆ ವಿವಿಧ ಕಡೆಯ ಸಾವಿರಾರು ಭಕ್ತರು ಈ ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಮಾರಮ್ಮನ ದೇಗುಲದ ಸಮೀಪ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ದೇವಾಲಯವೂ ಇದೆ. ಈ ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಈ ಜಾತ್ರೆಯ ವಿಶೇಷ.
40 ವರ್ಷಗಳ ಹಿಂದೆ ಈ ಕೊಂಡೋತ್ಸವ ಸಂಬಂಧ ಘರ್ಷಣೆಯಾಗಿತ್ತು. ನಂತರ ಪಟ್ಟಣದ ಎಲ್ಲ ಸಮುದಾಯದವರು ಕುಳಿತು ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಬಗ್ಗೆ ಚರ್ಚಿಸಿದರು. ನಂತರ ಜಾತ್ರಾ ಮಹೋತ್ಸವ ಆಚರಣೆ ಶುರು ಮಾಡಿದ್ದರು.
ಅಂದಿನಿಂದಲೂ ಸಾಮರಸ್ಯದಿಂದ ಮಸೀದಿ ಮುಂಭಾಗ ಕೊಂಡೋತ್ಸವ ನಡೆದುಕೊಂಡು ಬರುತ್ತಿದೆ. ದೇವಾಲಯದ ಅರ್ಚಕ ಶಿವಣ್ಣ ಕೊಂಡ ಹಾಯ್ದರು.
29ಸಿಎಚ್ಎನ್.4:
ಚಿತ್ರವಿದೆ
