ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ವನ್ಯಜೀವಿ ಮತ್ತು ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಿದೆ.
ಮೈಸೂರು ಮೃಗಾಲಯವು ಛಾಯಾಚಿತ್ರ ಪ್ರದರ್ಶನ, ಪ್ರಬಂಧ ರಚನಾ ಸ್ಪರ್ಧೆ, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಎಲೊಕ್ಯೂಷನ್ಸ್ಪರ್ಧೆ ಆಯೋಜಿಸುತ್ತ ಬಂದಿದೆ. ಮೃಗಾಲಯದ ಒಂದು ಕಾರ್ಯೋದ್ದೇಶ ಮತ್ತು ಸಂರಕ್ಷಣಾ ಶಿಕ್ಷಣದ ಪ್ರಯತ್ನವಾಗಿ 69ನೇ ವರ್ಷದ ವನ್ಯಜೀವಿ ಸಪ್ತಾಹವನ್ನು ಅ. 2 ರಿಂದ 8 ರವರೆಗೆ ಆಯೋಜಿಸುತ್ತಿದೆ.
ಅ. 2 ರಂದು ಬೆಳಗ್ಗೆ 7.30ಕ್ಕೆ ವನ್ಯಜೀವಿ ಸಪ್ತಾಹದ ಮಹತ್ವ ಸಾರಲು ಕಾಲ್ನಡಿಗೆಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೃಗಾಲಯದವರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡುವರು.
ವನ್ಯಜೀವಿ ಛಾಯಾಚಿತ್ರ ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವು ಅಂದು ನಡೆಯಲಿದೆ. ಮೃಗಾಲಯವು ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಕಾರ್ಯಕ್ರಮದಡಿ 5 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು 3 ಪ್ರವರ್ಗಗಳಲ್ಲಿ ಏರ್ಪಡಿಸಿತ್ತು. ಭಾರತದ ದೊಡ್ಡ ಬೆಕ್ಕುಗಳನ್ನು ಉಳಿಸಿ, ದೊಡ್ಡಬೆಕ್ಕುಗಳನ್ನು ಹಾಗೂ ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸಿ ಹಾಗೂ ಘರ್ಜನೆ ಮೌನವಾಗುವ ಮುನ್ನ ಕಾರ್ಯಪ್ರವೃತ್ತರಾಗೋಣ ಎಂಬ ವಿಷಯಸೂಚಿಗಳಡಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು 235 ವಿದ್ಯಾರ್ಥಿಗಳು ವಿವಿಧ ಶಾಲಾ- ಕಾಲೇಜುಗಳಿಂದ ಪಾಲ್ಗೊಳ್ಳಬಹುದು.
- ಜಾಹೀರಾತು -
ಅಂತಾರಾಷ್ಟ್ರೀಯ ಮೃಗಾಲಯ ಪ್ರಾಣಿಪಾಲಕರ ದಿನಾಚರಣೆಯನ್ನು ಅ. 4 ರಂದು ಆಯೋಜಿಸಿದೆ. ಅ. 5 ಮತ್ತು 6 ರಂದು ಬೆಳಗ್ಗೆ 7 ಗಂಟೆ ಪ್ರಕೃತಿ ನಡಿಗೆ ಕಾರ್ಯಕ್ರಮ ಆಯೋಜಿಸಿದೆ. ಪ್ರಬಂಧ ಬರೆಯುವುದು ಮತ್ತು ಭಾಷಣ ಸ್ಪರ್ಧೆ, ವನ್ಯಜೀವಿ ಸಪ್ತಾಹ ಸಮಾರೋಪ ಆಯೋಜಿಸಲಾಗಿದೆ.