ಮಂಡ್ಯ, ಫೆಬ್ರವರಿ 16, 2026 : ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಕಾರೆಕಟ್ಟೆ ಗ್ರಾಮದ ಸಮೀಪವಿರುವ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಭೀಕರ ಟ್ಯಾಂಕ್ ಸ್ಫೋಟ ಸಂಭವಿಸಿದ್ದು, ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಲ್ಲುಖಾನ್ ಮತ್ತು ಆಕಾಶ್ ಮೃತಪಟ್ಟ ದುರ್ದೈವಿಗಳೆಂದು ಗುರುತಿಸಲಾಗಿದೆ. ಸ್ಫೋಟದ ತೀವ್ರತೆಗೆ ಖಾಸಿಂ, ರವಿ, ಮಹಂತೇಶ್ ಹಾಗೂ ರಾಜೀವ್ ಕುಮಾರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಮಿಕಲ್ ಟ್ಯಾಂಕ್ ಸ್ಫೋಟಗೊಳ್ಳಲು ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ.
