ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಗೋಡೆಗೆ ಮೋಟಾರ್‌ನಿಂದ ಪೈಪ್ ಮೂಲಕ ನೀರು ಪೂರೈಸುವ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬ ಶನಿವಾರ ಮೃತಪಟ್ಟಿದ್ದಾರೆ.
ಕಾಮಗೆರೆ ಗ್ರಾಮದ ನಿವಾಸಿ ಸೋಮಣ್ಣ(49) ಮೃತರು. ಈತ ಗ್ರಾಮದಲ್ಲಿ ಎದುರಾದ ರಸ್ತೆ ವಿಸ್ತರಣೆ ಹಿನ್ನೆಲೆ ಭಾಗಶಃ ತನ್ನ ವಾಸದ ಮನೆ ಕಳೆದುಕೊಂಡು ಉಳಿದ ಸ್ಥಳದಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದು, ಮನೆ ಗೋಡೆಗೆ ವಿದ್ಯುತ್ ಮೋಟಾರ್ ಮೂಲಕ ಪೈಪ್‌ನಿಂದ ನೀರನ್ನು ಪೂರೈಸುತ್ತಿದ್ದನು.
ಈ ವೇಳೆ ಮೃತ ಸೋಮಣ್ಣ ಅವರ ಕೈಗೆ ಆಕಸ್ಮಿಕವಾಗಿ ವಿದ್ಯುತ್ ವೈರ್ ಸುತ್ತಿಕೊಂಡು ದಿಡೀರ್ ವಿದ್ಯುತ್ ವೈರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿದೆ. ಪರಿಣಾಮ, ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡರು. ವಿಷಯ ತಿಳಿದು ಕುಟುಂಬದವರು ಮೃತ ಸೋಮಣ್ಣ ಅವರನ್ನು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ಮೃತ ಸೋಮಣ್ಣ ಅವರ ಪುತ್ರಿ ಸುಚಿತ್ರಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
