ಮೈಸೂರು ದಸರಾ (Mysuru Dasara) ಸಂಭ್ರಮ ಕಣ್ತುಂಬಿಕೊಳ್ಳಲು ಇಡೀ ರಾಜ್ಯ ಕಾತುರದಿಂದ ಎದುರು ನೋಡುತ್ತಿದೆ. ಇದರ ನಡುವೆ ಮಹಿಷ ದಸರಾ (Mahisha Dasara) ವಿರುದ್ಧ ಮೈಸೂರು ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದು ಮಹಿಷ ದಸರಾ ಅಸಹ್ಯ, ಅಬದ್ಧ ಹಾಗೂ ಅನೈತಿಕ ಇದನ್ನು ನಾವು ತಡೆದೇ ತಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಮತ್ತೊಂದೆಡೆ ಅ.15ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾವನ್ನು ಆಚರಿಸಲು ಮುಂದಾಗಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿ ಆಚರಿಸಲಾಗುತ್ತಿದ್ದ ಮಹಿಷ ದಸರಾವನ್ನು ಅಕ್ಟೋಬರ್ 15 ರಂದು ನವರಾತ್ರಿ ಆರಂಭವಾದಾಗ ಉಡುಪಿಯಲ್ಲಿ ಆಚರಿಸಲು ಅಂಬೇಡ್ಕರ್ ಯುವ ಸೇನೆ ಮುಂದಾಗಿದೆ. ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದ್ರಾವಿಡ ದೊರೆ ಮಹಿಷಾಸುರನ ಬಗ್ಗೆ ಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಮಹಿಷಾ ದಸರಾ ಮತ್ತು ಮೂಲ ನಿವಾಸಿಗಳ ಸಾಂಸತಿಕ ಹಬ್ಬ ಆಚರಿಸುವುದಾಗಿ ಮಾಹಿತಿ ನೀಡಿದರು.