ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ವಿಲೀನಗೊಳಿಸುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ, ಏನುಮಾಡಬೇಕೆಂದು ರಾಮನಗರ ಚಾಮುಂಡೇಶ್ವರಿ ದೇವಿಯೇ ನಿರ್ಧರಿಸುತ್ತಾಳೆ ಎಂದು ಹೇಳಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಂಗರನಹಳ್ಳಿಯಲ್ಲಿರುವ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ರಾಮನಗರ ಜಿಲ್ಲೆಯಾದ ನಂತರ ಯಾವ ರೀತಿ ಅಭಿವೃದ್ಧಿಯಾಗಿದೆ ಗೊತ್ತಿದೆ. ನಾನು ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ಮಾಡಿಲ್ಲ. ರಾಮನಗರ ಮಣ್ಣಿನ ಶಕ್ತಿ ಹಾಳು ಮಾಡಬೇಕೆನ್ನುವುದು ಈ ವ್ಯಕ್ತಿಗಳ ಹುನ್ನಾರ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿಕೊಂಡು ಆಸ್ತಿ ಮೌಲ್ಯ ಹೆಚ್ಚಿಸಬೇಕೆಂಬ ಹುನ್ನಾರ. ಕನಕಪುರದ ಕಲ್ಲನ್ನು ದೇಶ ವಿದೇಶಗಳಿಗೆ ಸಾಗಿಸಿ ನುಂಗಿ ನೀರು ಕುಡಿದದ್ದಾಯ್ತು. ಅಲ್ಲಿನ ಭೂಮಿ ಬೆಲೆ ಏರಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.