ಮಡಿಕೇರಿ: ಜಿಲ್ಲೆಯ ವಿವಿಧ ಸಮಸ್ಯೆಗಳ ವಿರುದ್ಧ ಜನಪರವಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ, ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯ ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ವಿರಾಜಪೇಟೆಯ ಗೃಹ ಕಚೇರಿ ಸಮೀಪ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪವನ್ ಪೆಮ್ಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಶಾಸಕ ಪೊನ್ನಣ್ಣ, ಜನರೊಂದಿಗೆ ಸರಳವಾಗಿ ಬೆರೆಯಬಲ್ಲ, ಜನರ ಸಮಸ್ಯೆಯನ್ನು ಆಲಿಸುವ ಆಲಿಸುವವರು ಮತ್ತು ಕಾಳಜಿ ಹೊಂದಿರುವ ವ್ಯಕ್ತಿ ಜನ ಪ್ರತಿನಿಧಿಯಾಗುವುದು ಮತ್ತು ನಾಯಕನಾಗುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಯುವ ಸಮೂಹ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೆಲುವು ಸಾಧಿಸುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಮಾತನಾಡಿದ ಪವನ್, ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರ ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಯ ವೇಗವನ್ನು ಕಂಡು ಬೆರಗಾಗಿದ್ದೇನೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇವರಿಬ್ಬರಿಂದ ಶೀಘ್ರ ಪರಿಹಾರ ದೊರೆಯುತ್ತದೆ ಎನ್ನುವ ವಿಶ್ವಾಸದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಕೊಡಗು ರಕ್ಷಣಾ ವೇದಿಕೆಯಲ್ಲಿದ್ದ ಎಲ್ಲಾ ನನ್ನ ಬೆಂಬಲಿಗರು ಪಕ್ಷವನ್ನು ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಜನಪರ ಸಿದ್ಧಾಂತ ನಮಗೆ ಬಹಳ ಮೆಚ್ಚುಗೆಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ನಾವುಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಸಿ.ಎಸ್.ಅರುಣ್ ಮಾಚಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
