
ತುಮಕೂರು: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ 1915ರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ದೇಶದ ಅತ್ಯಂತ ಪುರಾತನ ಸಂಸ್ಥೆಯಾಗಿದ್ದು ಐದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಅದನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.
ಅವರು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಮಡಿವಾಳ ಮಾಚಿದೇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉದಯ ಮತ್ತು ವಿಕಾಸದ ಬಗ್ಗೆ ಮಾತನಾಡಿದ ಡಾ. ಡಿ.ಎನ್.ಯೋಗೀಶ್ವರಪ್ಪ, ಕನ್ನಡ ಭಾಷಾ ಪ್ರದೇಶಗಳು ವಿವಿಧ ಭಾಷಿಕರ ಆಡಳಿತದಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ನಡೆಸುತ್ತಿದ್ದಾಗ ಸರ್ ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಪದಭ್ಯುದಯ ಸಮಾಜವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯತೆಯನ್ನು ಮನಗಂಡು 5 ಮೇ, 1915ರಂದು ಬೆಂಗಳೂರಿನ ಸರ್ಕಾರಿ ಹೈಸ್ಕೂಲಿನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಗಿ ಆನಂತರ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತೆಂದು ನಾಮಕರಣ ಹೊಂದಿತು ಎಂದು ತಿಳಿಸಿದರು.
ಮಡಿವಾಳ ಮಾಚಿದೇವರ ಬಗ್ಗೆ ದತ್ತಿ ಉಪನ್ಯಾಸ ನೀಡಿದ ಆಯುರ್ವೇದ ವೈದ್ಯರಾದ ಡಾ. ಬಿ.ನಂಜುಂಡ ಸ್ವಾಮಿಯವರು ಬಸವಾದಿ ಶರಣರ ಸಮೂಹದಲ್ಲಿ ಶ್ರೇಷ್ಠ ವಚನಕಾರನಾಗಿದ್ದು ಆತನ ಪ್ರಯತ್ನದಿಂದಲೇ ವಚನ ಸಾಹಿತ್ಯ ಉಳಿಯಿತು. ಇಲ್ಲದಿದ್ದರೆ ಅದು 12ನೇ ಶತಮಾನದಲ್ಲಿಯೇ ಭಗ್ನವಾಗಿರುತ್ತಿತ್ತು ಎಂದರು.
ಬಸವಣ್ಣನವರ ಆಪ್ತ ವಲಯದಲ್ಲಿದ್ದ ಮಡಿವಾಳ ಮಾಚಿದೇವರು ಶಿವಶರಣರ ಮತ್ತು ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ಮಡಿಮಾಡಿ ಮುಟ್ಟಿಸುವ ಕಾಯಕವನ್ನು ಮಾಡುತ್ತಿದ್ದು ಮಡಿ ಬಟ್ಟೆ ಹೊತ್ತುಕೊಂಡು ನೀರಘಂಟೆ ಬಾರಿಸುತ್ತ ಭಕ್ತರಲ್ಲದವರು ತನ್ನನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದ ಧರ್ಮನಿಷ್ಠರಾಗಿದ್ದರು ಎಂದರು.
ವೇದಿಕೆಯಲ್ಲಿ ದತ್ತಿ ದಾನಿಗಳಾದ ನಿವೃತ್ತ ಉಪನ್ಯಾಸಕರಾದ ಹನುಮಂತಯ್ಯ ಹಾಜರಿದ್ದರು. ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು ಮೊದಲಾದವರು ಹಾಜರಿದ್ದರು. ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ್ ವಂದಿಸಿದರು. ಕೇಂದ್ರ ಕ.ಸಾಪ. ಪ್ರತಿನಿಧಿ ಡಾ. ಎಂ.ಗೋವಿಂದರಾಜು ನಿರೂಪಿಸಿದರು.
ಭಾವಚಿತ್ರ : ಜಿಲ್ಲಾ ಕ.ಸಾ.ಪ. ನಡೆಸಿದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಮತ್ತು ಮಡಿವಾಳ ಮಾಚಿದೇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ಉದ್ಘಾಟಿಸಿದರು. ಚಿತ್ರದಲ್ಲಿ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಸಣ್ಣಹೊನ್ನಯ್ಯ ಕಂಟಲಗೆರೆ, ಹನುಮಂತಯ್ಯ, ಜಿ.ಹೆಚ್.ಮಹದೇವಪ್ಪ, ಕೆಂಕೆರೆ ಮಲ್ಲಿಕಾರ್ಜುನ, ಶಿವಕುಮಾರ್, ಡೇವಿಡ್, ಡಾ. ಬಿ.ನಂಜುಂಡಸ್ವಾಮಿ ಇತರರಿದ್ದಾರೆ.
