ಹೊಳೆನರಸೀಪುರ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೆಕೋಟೆ ಹೋಬಳಿ ಪರಿಮಿ ತಿಗೆ ಒಳಪಡುವ ಎಳ್ಳೆಶಪುರ ಗ್ರಾಮದ ಜೆಡಿಎಸ್ ಪಕ್ಷದ ಅತ್ಯಂತ ಹಿರಿಯ ಮುಖಂಡ ಕೆಂಪರಾಜು ಜೆಡಿಎಸ್ ತೊರೆದು ಅವರ ಅಪಾರ ಅಭಿಮಾನಿಗಳೊಂದಿಗೆ ಹಾಸನ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆಂಪರಾಜು ಅವರಿಗೆ ಕಾಂಗ್ರೆಸ್ ಪಕ್ಷದ ಚಿಹ್ನೆವುಳ್ಳ ಹಸ್ತದ ಗುರುತಿನ ಶಲ್ಯವನ್ನು ತೊಡಿಸುವುದರ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಟಿ ಲಕ್ಷ್ಮಣ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಪಿಎಂಸಿ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಹಿರಿಯ ವಿಜ್ಞಾನಿ ಅಣ್ಣಯ್ಯ, ಪುರಸಭೆ ಮಾಜಿ ಸದಸ್ಯ ಎಚ್ ಎನ್ ರಾಘವೇಂದ್ರ, ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಟಿ ಲಕ್ಷ್ಮಣ ನಮ್ಮ ಕಾಂಗ್ರೆಸ್ ಪಕ್ಷದ ಜನಪರ ಕಾಳಜಿ ಮತ್ತು ನಮ್ಮ ನಾಯಕರ ಸರಳ ಸಜ್ಜನಿಕೆಯ ನಡೆಯ ನ್ನು ಒಪ್ಪಿ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರದ ಜನಪ್ರಿಯ ಗ್ಯಾರಂಟಿ ಕಾರ್ಯಕ್ರಮಗಳನ್ನು ಮೆಚ್ಚುವುದರ ಮೂಲಕ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಜೆಡಿಎಸ್ ಮುಖಂಡರುಗಳ ನಿಲುವನ್ನು ಈ ಸಂದರ್ಭದಲ್ಲಿ ತುಂಬು ಹೃದಯದಿಂದ ಸ್ವಾಗತಿಸಿ ಅವರುಗಳನ್ನು ಆತ್ಮೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತಿದೆ. ಇದೇ ರೀತಿ ನಮ್ಮ ಬ್ಲಾಕ್ ವ್ಯಾಪ್ತಿಯ ನೂರಾರು ಮುಖಂಡರುಗಳು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ನಮ್ಮ ನಾಯಕರಾದ ಶ್ರೇಯಸ್ ಎಂ ಪಟೇಲ್ ಅವರ ಸಾರಥ್ಯದಲ್ಲಿ ಸೇರ್ಪಡೆಯಾಗಿದ್ದು ಹಾಗೂ ಸೇರ್ಪಡೆಯಾಗುತ್ತಿದ್ದು ಅವರೆಲ್ಲರನ್ನೂ ಈ ಮೂಲಕ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.
