ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ ಮಾಡಿರುವುದು ಸರಿಯಲ್ಲ ಹಾಗೂ ಖಂಡನಾರ್ಹ ಎಂದಿರುವ ಸುಗಮ ಸಂಗೀತ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು, ಇನ್ನು ಮುಂದಾದರು ಈ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಮಿತಿ ರಚನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ತಜ್ಞರನ್ನು ಸಮಿತಿಗೆ ಸೇರಿಸಿರುವುದು ಸರಿ.
ಆದರೆ ಕೆಲವು ಕ್ಷೇತ್ರಗಳಲ್ಲಿ ಪರಿಣತಿ ಇಲ್ಲದೇ ಇರುವವರನ್ನು ಸೇರಿಸಿರುವುದು ಅವರಿಗೂ ಇರಿಸು ಮುರಿಸು ಉಂಟಾಗುವಂತೆ ಮಾಡಿದೆ. ಜೊತೆಗೆ ಈ ಸಾಲಿನ ಪ್ರಶಸ್ತಿಗೆ ಸೇವಾಸಿಂಧು ಮೂಲಕ ಅರ್ಜಿ ಆಹ್ವಾನ ಮಾಡಿರುವುದು ವಿಪರ್ಯಾಸ. ಆಯ್ಕೆ ಸಮಿತಿಯಲ್ಲಿ ಇರುವ ತಜ್ಞರು ಆಯಾ ಕ್ಷೇತ್ರದ ಸಾಧಕರ ಮಾಹಿತಿ ಹೊಂದಿರುತ್ತಾರೆ ಎಂಬುದು ನನ್ನ ಅಭಿಪ್ರಾಯ. ಪ್ರಶಸ್ತಿಗೆ ಅರ್ಹರು ಯಾರು ಎಂಬುದು ಅವರಿಂದಲೇ ಸಲಹೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.