ತುಮಕೂರು : ಜಿಲ್ಲೆಯ ಪ್ರತಿಷ್ಠೆ ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಎಚ್ ಎಂಟಿ ವಾಚ್ ಕಾರ್ಖಾನೆ ಈಗ ಬರೀ ನೆನಪು ಮಾತ್ರ. ಆದರೆ, ಅದೇ ಜಾಗದಲ್ಲಿ 2024 ಮಾರ್ಚ್ ಇಲ್ಲವೆ ಏಪ್ರಿಲ್ ವೇಳೆಗೆ ತುಮಕೂರಿನಲ್ಲಿ ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಇದುವರೆಗೂ ಇಸ್ರೋ ಉಪಗ್ರಹಗಳ ಉಡಾವಣೆಗೆ ಉಪಯೋಗಿಸುತ್ತಿದ್ದ ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ತುಮಕೂರಿನ ಘಟಕದ ಮೂಲಕ ಇಸ್ರೋ ಸ್ಥಾವಲಂಬಿಯಾಗಲಿದೆ ಎಂಬುದು ಹೆಗ್ಗಳಿಕೆ. ಚಂದ್ರಯಾನ -೩ ರ ಯಶಸ್ಸಿನ ಹಿನ್ನೆಲೆ ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಪದವಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ.ಎಸ್.ಸೋಮನಾಥ್ ರನ್ನು ಬೆಂಗಳೂರಿನ ಆಂತರಿಕ ಭವನದಲ್ಲಿ ಭೇಟಿಯಾಗಿ ಗೌರವಿಸುವ ಜತೆಗೆ ತುಮಕೂರಿನ ಪ್ರೊಪುಲೆಂಟ್ ಟ್ಯಾಂಕರ್‌ಗಳ ಉತ್ಪಾದನಾ ಘಟಕವನ್ನು ಶೀಘ್ರ ಕಾರ್ಯಾರಂಭ ಮಾಡುವಂತೆ ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿದ್ದೆ ಎಂದು ನೆನಪಿಸಿಕೊಂಡರು.