ಭಾರತ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ಜಪಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಇದರೊಂದಿಗೆ ಪ್ರಣಯ್ ಮಾತ್ರ ಟೂರ್ನಿಯಲ್ಲಿ ಉಳಿದುಕೊಂಡಿದ್ದು, ಇತರರು ಅಭಿಯಾನ ಕೊನೆಗೊಳಿಸಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಪ್ರಣಯ್ ಹಾಂಕಾಂಗ್ನ ಲೀ ಚ್ಯುಕ್ ಯು ವಿರುದ್ಧ 22-20, 19-21, 21-17 ಅಂತರದಲ್ಲಿ ಜಯಗಳಿಸಿದರು. ಆದರೆ ಲಕ್ಷ್ಯ ಸೇನ್ ಹಾಗೂ ಪ್ರಿಯಾನ್ಶು ರಾಜಾವರ್ ಸೋತು ಹೊರಬಿದ್ದರು. ಮಂಗಳವಾರ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಕೂಡಾ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದರು.
ಭಾರತದ ಕ್ಯಾಂಡಿಟೇಟ್ಸ್ ಅಥ್ಲೀಟ್ಸ್ಗಳ ಸಿದ್ಧತೆಗಾಗಿ ಚೆಸ್ ಒಕ್ಕೂಟ ₹2 ಕೋಟಿ ಸಹಾಯಧನ!
ನವದೆಹಲಿ: 2024ರ ಏ.2ರಿಂದ 24ರ ವರೆಗೆ ಕೆನಡಾದಲ್ಲಿ ನಡೆಯಲಿರುವ ಚೆಸ್ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಮೂವರು ಚೆಸ್ ಪಟುಗಳಿಗೆ ಸಿದ್ಧತೆಗಾಗಿ ಅಖಿಲ ಭಾರತ ಚೆಸ್ ಫೆಡರೇಶನ್(ಎಐಸಿಎಫ್) 2 ಕೋಟಿ ರು. ಸಹಾಯಧನ ಘೋಷಿಸಿದೆ. ಪುರುಷರ ವಿಭಾಗದಲ್ಲಿ ಆರ್.ಪ್ರಜ್ಞಾನಂದ, ವಿದಿತ್ ಗುಜರಾತಿ, ಮಹಿಳೆಯರ ವಿಭಾಗದಲ್ಲಿ ಆರ್.ವೈಶಾಲಿ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗೆದ್ದವರು ಹಾಲಿ ವಿಶ್ವ ಚಾಂಪಿಯನ್ ಜೊತೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದ್ದಾರೆ.
- ಜಾಹೀರಾತು -
ಫಿಫಾ: ಅರ್ಹತಾ ಸುತ್ತಿನಲ್ಲಿ ಇಂದು ಭಾರತ vs ಕುವೈತ್
ಕುವೈತ್: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಗುರುವಾರ ಭಾರತಕ್ಕೆ ಕುವೈತ್ ಸವಾಲು ಎದುರಾಗಲಿದೆ. 36 ತಂಡಗಳಿರುವ ಅರ್ಹತಾ ಟೂರ್ನಿಯನ್ನು ತಲಾ 4 ತಂಡಗಳಿರುವ 9 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ವಿಶ್ವಕಪ್ ಅರ್ಹತಾ ಸುತ್ತಿನ 3ನೇ ಹಂತ ಹಾಗೂ 2027ರ ಎಎಫ್ಸಿ ಏಷ್ಯನ್ ಕಪ್ಗೆ ಅರ್ಹತೆ ಪಡೆಯಲಿವೆ. ಭಾರತ ‘ಎ’ ಗುಂಪಿನಲ್ಲಿದ್ದು, ಇತರ 3 ತಂಡಗಳ ವಿರುದ್ಧ ತಲಾ 2 ಬಾರಿ ಆಡಲಿದೆ. ನ.21ರಂದು ಕತಾರ್ ವಿರುದ್ಧ ಆಡಲಿರುವ ಭಾರತಕ್ಕೆ 2024ರ ಮಾರ್ಚ್ 21ರಂದು ಅಫ್ಘಾನಿಸ್ತಾನ ಸವಾಲು ಎದುರಾಗಲಿದೆ. ಬಳಿಕ ಮಾ.26ಕ್ಕೆ ಮತ್ತೆ ಅಫ್ಘಾನಿಸ್ತಾನ, ಜೂ.6ಕ್ಕೆ ಕುವೈತ್, ಜೂ.11ಕ್ಕೆ ಕತಾರ್ ವಿರುದ್ಧ ಆಡಲಿದೆ.