ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿ ಎಷ್ಟು ಗೊಂದಲಮಯವಾಗಿರಲಿದೆ ಎನ್ನುವುದಕ್ಕೆ ಈ ಸರಣಿಯೇ ಸಾಕ್ಷಿ. ಏಕದಿನ ವಿಶ್ವಕಪ್ ಮುಗಿದ ನಾಲ್ಕೇ ದಿನದಲ್ಲಿ ಫೈನಲ್‌ನಲ್ಲಿ ಎದುರಾಗಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಟಿ20 ಸರಣಿ ಆರಂಭಗೊಳ್ಳುತ್ತಿದೆ. 5 ಪಂದ್ಯಗಳ ಸರಣಿ ಇದ್ದಾಗಿದ್ದು, ಗುರುವಾರ ಮೊದಲ ಪಂದ್ಯವು ಇಲ್ಲಿನ ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಈ ವರ್ಷ ಪದೇ ಪದೇ ಎದುರಾಗುತ್ತಲೇ ಇದ್ದರೂ, ಈ ಸರಣಿ ತನ್ನದೇ ರೀತಿಯಲ್ಲಿ ಮಹತ್ವವನ್ನು ಪಡೆದಿದೆ.
ಈ ಸರಣಿಯನ್ನು ಈಗೇಕೆ ನಡೆಸಲಾಗುತ್ತಿದೆ ಎಂದು ಹಲವರಿಗೆ ಅನಿಸಬಹುದು. ಆದರೆ 2024ರ ಟಿ20 ವಿಶ್ವಕಪ್‌ಗೆ ಇನ್ನು 7 ತಿಂಗಳಷ್ಟೇ ಬಾಕಿ ಇದ್ದು, ವಿಶ್ವಕಪ್‌ಗೂ ಮುನ್ನ ಎರಡೂ ತಂಡಗಳಿಗೆ ಕೇವಲ 11 ಪಂದ್ಯಗಳಷ್ಟೇ ಸಿಗಲಿದೆ. ಹೀಗಾಗಿ ವಿಶ್ವಕಪ್ ಸಿದ್ಧತೆಗೆ ಈ ಸರಣಿ ಬಳಕೆಯಾಗಲಿದೆ.
ಹಿರಿಯರಿಗೆಲ್ಲಾ ವಿಶ್ರಾಂತಿ: ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಆಟಗಾರರಿಗೆ ಸಹಜವಾಗಿಯೇ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ತಂಡದಲ್ಲಿದ್ದ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ತಂಡ ಮುನ್ನಡೆಸಲಿದ್ದು, ಕೇವಲ 2 ಪಂದ್ಯಗಳನ್ನಾಡಿದ್ದ ಇಶಾನ್ ಕಿಶನ್ ಹಾಗೂ ಆಡುವ ಅವಕಾಶ ಪಡೆಯದ ವೇಗಿ ಪ್ರಸಿದ್ಧ್ ಕೃಷ್ಣ ಈ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿದ್ದಾರೆ. ಇನ್ನು ಮೊದಲ 3 ಪಂದ್ಯಗಳಿಂದ ಹೊರಗುಳಿಯಲಿರುವ ಶ್ರೇಯಸ್ ಅಯ್ಯರ್, ಕೊನೆಯ 2 ಪಂದ್ಯಗಳಿಗೆ ತಂಡ ಕೂಡಿಕೊಳ್ಳಲಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ರಾಂತಿ ಬಯಸಿದ್ದು, ವಿವಿಎಸ್ ಲಕ್ಷ್ಮಣ್ ಈ ಸರಣಿಯಲ್ಲಿ ತಂಡಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.
ಕಿಶನ್‌ಗೆ ಸುವರ್ಣಾವಕಾಶ: ಮುಂದಿನ ವಿಶ್ವಕಪ್‌ಗೂ ಮುನ್ನ ವಿಕೆಟ್ ಕೀಪರ್ ಸ್ಥಾನವನ್ನು ಕಾಯಂಗೊಳಿಸಿಕೊಳ್ಳಲು ಇಶಾನ್ ಕಿಶನ್‌ಗೆ ಇದು ಸುವರ್ಣಾವಕಾಶ. ಈ ವರ್ಷದ ಮೊದಲ 8 ಟಿ20 ಪಂದ್ಯಗಳಲ್ಲಿ ಕಿಶನ್‌ಗೆ ಕಾಯಂ ಸ್ಥಾನ ಸಿಕ್ಕಿತ್ತು. ಆದರೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಸದ್ಯ ಸ್ಯಾಮ್ಸನ್‌ಗೆ ತಂಡದಲ್ಲಿ ಜಾಗವಿಲ್ಲ. ಹೀಗಾಗಿ ಕಿಶನ್ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಕಾಯುತ್ತಿದ್ದಾರೆ.
ಇನ್ನು ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಪೈಕಿ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎನ್ನುವ ಕುತೂಹಲವೂ ಇದೆ. ಭಾರತದ ಸಂಭವನೀಯ ಆಟಗಾರರ ಪಟ್ಟಿಯನ್ನು ಊಹಿಸುವುದು ಕಷ್ಟ. ಈ ವರ್ಷ ಹಲವು ಬಾರಿ ತಂಡದ ಸಂಯೋಜನೆ ಬದಲಿಸಿರುವ ಭಾರತ ಯಾರನ್ನು ಯಾವ ಪಾತ್ರಕ್ಕೆ ಕಣಕ್ಕಿಳಿಸಲಿದೆ ಎನ್ನುವು ಕುತೂಹಲ ಅಭಿಮಾನಿಗಳಲ್ಲಿದೆ.
ಇನ್ನು ಆಸ್ಟ್ರೇಲಿಯಾ ತನ್ನ ವಿಶ್ವಕಪ್ ವಿಜೇತ ತಂಡದಲ್ಲಿದ್ದ 7 ಆಟಗಾರರನ್ನು ಈ ಸರಣಿಗೆ ಉಳಿಸಿಕೊಂಡಿದೆ. ಡೇವಿಡ್ ವಾರ್ನರ್ ಸರಣಿಯಿಂದ ಹಿಂದೆ ಸರಿದಿದ್ದು, ಸ್ಟೀವ್ ಸ್ಮಿತ್ ಆರಂಭಿಕನಾಗಿ ಆಡುವ ನಿರೀಕ್ಷೆ ಇದೆ. ವಿಶ್ವಕಪ್‌ನಲ್ಲಿ ಹೆಚ್ಚಿನ ಅವಕಾಶ ಪಡೆಯದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಶಾನ್ ಅಬ್ಬಾಟ್ ಈ ಸರಣಿಯಲ್ಲಿ ಆಡಲಿದ್ದಾರೆ.
