
ಪ್ರತಿನಿಧಿ ವರದಿ ಚಾಮರಾಜನಗರ
ಶಿಕ್ಷಕರ ಪರವಾಗಿ ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಶಿಕ್ಷಣ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಧ್ವನಿ ಎತ್ತುವ ಸಲುವಾಗಿ ಜೂನ್ 3ರಂದು ವಿಧಾನಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಶಿಕ್ಷಕರು ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಡಾ. ಹ.ರಾ.ಮಹೇಶ್ ಹೇಳೀದರು.
ಶಿಕ್ಷಣ ಕ್ಷೇತ್ರದ ಬಗೆಗಿನ ಹಿನ್ನೆಲೆ ತಿಳಿಯದವರು ಶಿಕ್ಷಣ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಿರುವುದು ದುರಂತವೇ ಸರಿ. ಶಿಕ್ಷಣ ರಂಗದಲ್ಲಿ ಪ್ರಗತಿ ತರುವ ಸಲುವಾಗಿ, ಇಲಾಖೆಯೊಳಗಿನ ಸಮಸ್ಯೆಗಳಿಗೆ ಸಿಲುಕಿರುವ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರು ಮಾನಸಿಕ ಖಿನ್ನತೆಯಿಂದ ಹೊರಗಡೆ ಬರಲು ಸಹಾಯವಾಗುವಂತೆ ಪರಿಷತ್ತಿನಲ್ಲಿ ನಾನು ಅವರ ಪರವಾಗಿ ದನಿ ಎತ್ತುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಮಹತ್ವ ಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶಾಲೆಗಳಲ್ಲಿ ಎಲ್ಲ ಕೆಲಸಗಳಲ್ಲಿಯೂ ಹಂಚಿಕೆ ಇದ್ದರು ಸಹ ಆಡಳಿತ ವರ್ಗ ಹಾಗೂ ಸಿಬ್ಬಂದಿ ಇಲ್ಲದಿರುವ ಕಡೆಗಳಲ್ಲಿ ಎಲ್ಲ ಕೆಲಸಗಳನ್ನು ಶಿಕ್ಷಕರೇ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯ ವಿರುದ್ದ ಹೋರಾಡಿ ಶಿಕ್ಷಕರಿಗೆ ನ್ಯಾಯಕೊಡಿಸುತ್ತೇನೆ ಎಂದರು.
ಏಕರೂಪ ಶಿಕ್ಷಣ ಮತ್ತು ಸಮಾನ ಶಿಕ್ಷಣ ಜಾರಿಗಾಗಿ ನಾನು ಪರಿಷತ್ತಿನಲ್ಲಿ ಹೋರಾಡುತ್ತೇನೆ. ನಾನು ಕೂಡ ಶಿಕ್ಷಕನಾಗಿರುವುದರಿಂದ ಶಿಕ್ಷಕರ ಬಗೆಗಿನ ಎಲ್ಲ ಸಮಸ್ಯೆಗಳು ನನಗೆ ಅರ್ಥವಾಗುತ್ತದೆ. ಶಿಕ್ಷಕರಿಗೆ ಗುಣಮಟ್ಟದ ತರಬೇತಿಯ ಅವಶ್ಯಕತೆ ಇದೆ. ಹೀಗಾಗಿ ಅವರ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದರೆ ಅವರ ಪರವಾಗಿ ನಾನು ಹೋರಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಜಿಲ್ಲಾ ಸಂಯೋಜಕ ರಾಜಶೇಖರ್, ಉಪಾಧ್ಯಕ್ಷರಾದ ಬ್ಯಾಡಮೂಡಲು ಬಸವಣ್ಣ, ರಾಜೇಂದ್ರ ಹೊಂಡರಬಾಳು, ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಮಹೇಶ್, ಟೌನ್ ಅಧ್ಯಕ್ಷ ರಂಗಸ್ವಾಮಿ ಇದ್ದರು.
19ಸಿಎಚ್ಎನ್.2:
ಚಿತ್ರವಿದೆ
