ಬೆಂಗಳೂರು ಅ.21: ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ನಾಯಕರ ಮಧ್ಯೆ ವಾಗ್ಯುದ್ಧ ನಡೆದಿದೆ. ನಮ್ಮ ಹತ್ತಿರ ಬಂದು ತಿಂದು ಉಂಡು ಮಜಾ ಮಾಡಿಕೊಂಡಿರುವವರು ಅವರು, ಸಾಲ ತೀರಿಸಿಕೊಂಡು ಕುತ್ತಿಗೆ ಕುಯ್ಯಿಸಿಕೊಂಡು ಸಾಯುತ್ತಿರುವವರು ನಾವು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ದೇಶದ ಆಸ್ತಿ, ಜನರು ಬದುಕು ಮತ್ತು ನಮ್ಮ ಸಂಸ್ಕೃತಿ. ಅವರ ಮಗ ನಟನೆ ಮಾಡುತ್ತಾನೆ, ಇವರು ದೇವಾಲಯಗಳು, ಚರ್ಚ್, ಮಸೀದಿ ಮತ್ತು ಕ್ರೀಡೆ ಅಂತ ಸಿನಿಮಾ ತಯಾರು ಮಾಡುತ್ತಾರೆ. ಎಲ್ಲ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು. ನನಗೂ ಬಂದಿತ್ತು. ರಾಜಕಾರಣ ಮಾಡುವವರು ಮಾಡಲಿ. ಅವರಿಗೆ ಒಳ್ಳೆದಾಗ್ಲಿ. ಬರಗಾಲದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ ಎಂದರು.
ದುಡ್ಡು ಮಾಡುವುದು, ಕೃತಕ ವಿದ್ಯುತ್ ಅಭಾವ ಸೃಷ್ಟಿ ಬಗ್ಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಪ್ರತೀ ವರ್ಷ ಶೇ 10 ರಿಂದ 15 ಹೆಚ್ಚಿಗೆ ಉತ್ಪಾದನೆ ಮಾಡಬೇಕು. ಅವರಿಗೇನಾದರು ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ಅವರಿಗೆ ಗೊತ್ತಾಗುತ್ತಿತ್ತು. 192 ತಾಲೂಕುಗಳನ್ನು ಸುಮ್ಮನೇ ಘೋಷಣೆ ಮಾಡುತ್ತಿದ್ವಾ? ಎಂದು ಪ್ರಶ್ನಿಸಿದರು.