ಜೆಡಿಎಸ್ ಪಕ್ಷದ ಜಾತ್ಯತೀತ ನಿಲುವಿನ ಬಗ್ಗೆ ಲಘುವಾಗಿ ಟೀಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯವರು ಜಾತ್ಯಾತೀತ, ಕೋಮುವಾದ ಎಂದು ಹೇಳಿಕೊಂಡೇ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಜಾತ್ಯಾತೀತ ತತ್ವಗಳನ್ನು ಆಚರಣೆ ಮಾಡುವುದಿಲ್ಲ. ಅವರು ಛದ್ಮವೇಷಧಾರಿ, ಡೋಂಗಿ ಸಮಾಜವಾದಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ.
ಮುಖ್ಯಮಂತ್ರಿ ಸೀಟಿನಲ್ಲಿ ಕೂತರೂ ‘ಸಿದ್ದಸುಳ್ಳು’ಗಳಿಗೆ ಕೊರತೆಯೇನೂ ಇಲ್ಲ. ‘ಜಾತ್ಯಾತೀತ’ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ. ಅವರ ಅಡ್ಜಸ್ಟ್ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿಯಾಗಿದೆ. ಇಂಡಿಯಾ ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತವೇ? ಎಂದು ಕಿಡಿಕಾರಿದ್ದಾರೆ.