ಬೆಂಗಳೂರು: ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ ಹೊಂದಿದೆ. ಆದರೆ ಇನ್ನು ಮುಂದೆ ಇದು ಬದಲಾಗಬಹುದು ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ ಹೊಂದಿದೆ. ಆದರೆ ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ; ಕಾಂಗ್ರೆಸ್ ಸರಕಾರ ‘ಕರ್ನಾಟಕವನ್ನು ಕುಡುಕರ ತೋಟ’ವನ್ನಾಗಿ ಮಾಡಲಿದೆ. ಚುನಾವಣೆಗೆ ಮುನ್ನ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುತ್ತಿದ್ದರು, ಗೆದ್ದ ನಂತರ ‘ಕರ್ನಾಟಕ ಕುಡುಕರ ತೋಟ’ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಸಂಕಲ್ಪ ಎಂದು ಕಿಡಿಕಾರಿದ್ದಾರೆ. ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರಕಾರದ್ದು ಎಂದು ಟೀಕಿಸಿರುವ ಎಚ್ಡಿ ಕುಮಾರಸ್ವಾಮಿ, ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದ್ಹೇಳಿ, ಈಗ ಮನೆಮನೆಗೂ ‘ಮದ್ಯಭಾಗ್ಯ’ ನೀಡಲು ಹೊರಟಿದೆ. ಸರಕಾರವು ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ಟಾಂಗ್ ನೀಡಿದ್ದಾರೆ.
