ಈ ಬಾರಿಯ ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯುವುದಾಗಿ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ಈ ವಿಶ್ವಕಪ್ನೊಂದಿಗೆ ನನ್ನ ಕಾರ್ಯಾವಧಿ ಮುಗಿಯಲಿದ್ದು, ಇದಾಗ್ಯೂ ಮತ್ತೊಮ್ಮೆ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ.
ಇದರೊಂದಿಗೆ ಟೀಮ್ ಇಂಡಿಯಾ ಜೊತೆಗಿನ ರಾಹುಲ್ ದ್ರಾವಿಡ್ ಅವರ ನಂಟು ಈ ಬಾರಿಯ ಟಿ20 ವಿಶ್ವಕಪ್ನೊಂದಿಗೆ ಮುಗಿಯಲಿದೆ. ನವೆಂಬರ್ 2021 ರಲ್ಲಿ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಹಲವು ಸರಣಿಗಳಲ್ಲಿ ಜಯ ಸಾಧಿಸಿತ್ತು.
ಇದಾಗ್ಯೂ ಐಸಿಸಿ ಟೂರ್ನಿ ಗೆಲ್ಲಲಾಗಲಿಲ್ಲ. ಇದರ ನಡುವೆ ಭಾರತ ತಂಡವು 2022 ರಲ್ಲಿ ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದೆ. ಹಾಗೆಯೇ 2023 ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಕಣಕ್ಕಿಳಿದಿದೆ. ಆದರೆ ರಾಹುಲ್ ದ್ರಾವಿಡ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾಗೆ ಐಸಿಸಿ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ.
ಈ ಬಾರಿಯ ಟಿ20 ವಿಶ್ವಕಪ್ನೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆರಿಯರ್ ಮುಗಿಯಲಿದೆ. ಹೀಗಾಗಿ ಐಸಿಸಿ ಟ್ರೋಫಿ ಗೆಲ್ಲಲು ಇದುವೇ ಕೊನೆಯ ಅವಕಾಶ. ಅದರಂತೆ ಟಿ20 ವಿಶ್ವಕಪ್ನೊಂದಿಗೆ ಟೀಮ್ ಇಂಡಿಯಾ ಆಟಗಾರರು ರಾಹುಲ್ ದ್ರಾವಿಡ್ಗೆ ಬೀಳ್ಕೊಡಲಿದ್ದಾರಾ ಕಾದು ನೋಡಬೇಕಿದೆ.
ಟೀಮ್ ಇಂಡಿಯಾದ ವೇಳಾಪಟ್ಟಿ ಇಲ್ಲಿದೆ:
| ದಿನಾಂಕ | ಪಂದ್ಯಗಳು | ಸಮಯ (IST) | ಸ್ಥಳ |
| 05-ಜೂನ್-24 | ಭಾರತ vs ಐರ್ಲೆಂಡ್ | 8:00 PM | ನ್ಯೂಯಾರ್ಕ್ |
| 09-ಜೂನ್-24 | ಭಾರತ vs ಪಾಕಿಸ್ತಾನ್ | 8:00 PM | ನ್ಯೂಯಾರ್ಕ್ |
| 12-ಜೂನ್-24 | ಭಾರತ vs ಯುಎಸ್ಎ | 8:00 PM | ನ್ಯೂಯಾರ್ಕ್ |
| 15-ಜೂನ್-24 | ಭಾರತ vs ಕೆನಡಾ | 8:00 PM | ಫ್ಲೋರಿಡಾ |
ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.
