ಪ್ರತಿನಿಧಿ ವರದಿ ಚಾಮರಾಜನಗರ
ಪೆಟ್ರೋಲಿಯಂ ಉತ್ಪನ್ನಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಹಾಗೂ ಕೃಷಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನ.26 ರಿಂದ 28 ರವರೆಗೆ ಪ್ರತಿಭಟನೆ ನಡೆಸಲಿದೆ.
ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯಂತೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ವಿಧೇಯಕ ರದ್ಧತಿ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ. ರಾಜ್ಯದ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿತ್ತು. ಜತೆಗೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ನೀಡಿತ್ತು. ಅದನ್ನು ಈಡೇರಿಸಿಲ್ಲ ಎಂದು ದೂರಿದರು.
- ಜಾಹೀರಾತು -
ರಾಜ್ಯದ 214 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಯಾವುದೇ ಬರ ಪರಿಹಾರ ವಿತರಿಸಿಲ್ಲ. ಈ ವರ್ಷದ ಸೆ.23 ರಂದು ಹೊಸದಾಗಿ ಕೊಳವೆಬಾವಿ ಕೊರೆಸುವ ರೈತರು ವಿದ್ಯುತ್, ತಂತಿ ಕಂಬ, ಟ್ರಾನ್ಸ್ ಫಾರ್ಮರ್ ಅಳವಡಿಸಿಕೊಳ್ಳುವ ವೆಚ್ಚವನ್ನು ರೈತರೆ ಭರಿಸಬೇಕು ಎಂಬ ನಿಯಮವನ್ನು ಕೈಬಿಡಬೇಕೆಂದು ಪ್ರತಿಭಟಿಸಲಾಗುವುದು ಎಂದರು.
ನ.28 ರಂದು ರಾಜಭವನ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಧರಣಿಯಲ್ಲಿ ಕಾರ್ಮಿಕ ಸಂಘಟನೆಗಳ ಸಹಸ್ರಾರು ಕಾರ್ಮಿಕರು ಭಾಗವಹಿಸುವರು ಎಂದು ತಿಳಿಸಿದರು. ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಎಲ್ಲ ಬೆಳೆಗಳಿಗೂ ಸಮಗ್ರ ವಿಮಾ ಯೋಜನೆ ಅನುಷ್ಠಾನ ಮಾಡಬೇಕು, ದೆಹಲಿ ಹೋರಾಟದ ವೇಳೆ ರೈತರಮೇಲೆ ಹಾಕಲಾಗಿದ್ದ ಎಲ್ಲ ಪೋಲಿಸ್ ಮೊಕದ್ದಮೆ ವಾಪಸ್ ಪಡೆಯಬೇಕು ಎಂದರು.
ಪ್ರೀಪೇಯ್ಡ್ ಮೀಟರ್ ಅಳವಡಿಸಬಾರದು, ಅರಣ್ಯ ಹಕ್ಕು ಕಾಯ್ದೆಯಡಿ 15 ವರ್ಷಕ್ಕೂ ಹೆಚ್ಚು ಸಾಗುವಳಿ ಮಾಡಿದ ಪ್ರತಿಯೊಬ್ಬ ರೈತರಿಗು ಸಾಗುವಳಿ ಪತ್ರ ನೀಡಬೇಕು. ಪಹಣಿ, ಮ್ಯುಟೇಷನ್, ಹದ್ದುಬಸ್ತು, ವರಮಾನ ಜಾತಿ ಪ್ರಮಾಣಪತ್ರ ಪಡೆಯಲು ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚನೂರು ಸಿದ್ದವೀರಪ್ಪ, ಅಬನಿಶಿವಪ್ಪ, ಉಪಾಧ್ಯಕ್ಷ ತರೀಕೆರೆಮಹೇಶ್ ಇದ್ದರು.