ತುಮಕೂರು: ನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರ ಮತಯಾಚಿಸಿದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಿತಾಮಹ ಹೆಚ್.ಡಿ. ದೇವೇಗೌಡ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿ ನಡುಸುತ್ತಿದೆ ಮತ್ತು ರಾಜ್ಯದೆಲ್ಲೆಡೆ ನೀರಿಗಾಗಿ ಹಾಹಾಕಾರವೆದ್ದಿದ್ದರೂ ಅದನ್ನು ಪರಿಹರಿಸದೆ ಕೇಂದ್ರ ಸರ್ಕಾರವನ್ನು ದೂರುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗರ್ವಭಂಗ ಮಾಡಬೇಕು ಅಂತ ಹೇಳಿದ್ದನ್ನು ಪ್ರಸ್ತಾಪಿಸಿದ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿಯವರು 150 ಕೋಟಿ ಜನರನ್ನೊಳಗೊಂಡ ಭಾರತದ ಚುಕ್ಕಾಣಿ ಹಿಡಿದು ಸಮರ್ಥ ಆಡಳಿತ ನೀಡುತ್ತಾ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿದ್ದಾರೆ. 150 ಕೋಟಿ ಜನರಿರುವ ದೇಶದ ಆಡಳಿತ ನಡೆಸುತ್ತಿರುವ ಪ್ರಧಾನಿಯವರ ಬಗ್ಗೆ 6 ಕೋಟಿ ಜನಸಂಖ್ಯೆಯುಳ್ಳ ಒಬ್ಬ ರಾಜ್ಯದ ಮುಖ್ಯಮಂತ್ರಿ ಮನಸ್ಸಿಗೆ ಬಂದಂತೆ ಮಾತಾಡಿದರೆ ಆ ಮುಖ್ಯಮಂತ್ರಿಯ ಗರ್ವಭಂಗ ಆಗಬೇಡವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ತಾನು ಗರ್ವಭಂಗ ಪದ ಬಳಸಿದ್ದು ಯಾರಿಗಾದರೂ ತಪ್ಪೆನಿಸಿದ್ದರೆ ಕ್ಷಮೆ ಕೇಳುತ್ತೇನೆ ಎಂದು ದೇವೇಗೌಡ ಹೇಳಿದರು. ಮುಂದುವರಿದು ಮಾತಾಡಿದ ಅವರು, ಒಂದು ವೇಳೆ ಸೋಮಣ್ಣ ಈ ಬಾರಿ ಸೋತರೆ ತಾನು ಪ್ರಧಾನಿ ಮೋದಿಯವರ ಬಳಿ ಹೋಗಿ ಕಾವೇರಿ ನದಿ ನೀರಿನ ವಿವಾದವನ್ನು ಬಗೆಹರಿಸಿ ಅಂತ ತಲೆಯೆತ್ತಿ ಕೇಳುವ ಯೋಗ್ಯತೆ ತನಗಿರಲ್ಲ ಎಂದು ಹೇಳಿದರು.
