

ಕೆ.ಬಿ.ಲೋಕೇಶ್ ಕೋಣನೂರು
ಕಳೆದ ವರ್ಷ ಇದೇ ಸಮಯದಲ್ಲಿ ಕೆರೆಗಳು ಬರಿದಾಗಿದ್ದವು. ಆದರೆ ಈ ಬಾರಿಯ ಬೇಸಿಗೆಯಲ್ಲಿ ಕೆರೆಗಳು ತುಂಬಿ ತುಳುಕುತ್ತಿದ್ದು, ಮುಂದಿನ ಕೆರೆಗಳಿಗೆ ನೀರು ಹರಿದು ಹೋಗುತ್ತಿರುವ ದೃಶ್ಯ, ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಂಡುಬಂದಿದೆ.
ಹೌದು, ಈ ಬಾರಿಯ ಬೇಸಿಗೆಯಲ್ಲಿ ಕೆರೆಗಳು ಮೈದುಂಬಿವೆ.ಇದಕ್ಕೆ ಪ್ರಮುಖ ಕಾರಣ ಈ ಒಂದು ಶಾಶ್ವತ ಯೋಜನೆ. 2014ರಲ್ಲಿ ಪ್ರಾರಂಭಗೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಮೊದಲನೇ ಹಂತದ ಯೋಜನೆ.
ನಂಜನಗೂಡು ತಾಲೂಕು ಮತ್ತು ಚಾಮರಾಜನಗರ ಜಿಲ್ಲೆಯ ಸುಮಾರು 22 ಕೆರೆಗಳಿಗೆ ಅಂದಿನ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಂಜನಗೂಡಿನಲ್ಲಿರುವ ಕಪಿಲಾ ನದಿಯಿಂದ ಪೈಪ್ ಲೈನ್ ಮೂಲಕ ತಾಲೂಕಿನ ಕೋಣನೂರು ಕೆರೆಗೆ ತಲುಪಿ ನಂತರ ಸ್ವಾಭಾವಿಕವಾಗಿ ಅಲ್ಲಿಂದ ಮುಂದಿನ ಕೆರೆಗಳಿಗೆ ಹರಿದುಹೋಗುತ್ತಿದೆ.
ಈ ಯೋಜನೆಯನ್ನು ಜಾರಿಗೆ ತಂದಿದ್ದು ರೈತರಿಗೆ ವರವಾಗಿ ಪರಿಣಮಿಸಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ, ಈ ಯೋಜನೆ ವ್ಯಾಪ್ತಿಯ ಕೋಣನೂರು, ಚುಂಚನಹಳ್ಳಿ, ಬೆಂಡರವಾಡಿ, ಹಳೆಪುರ, ಕೆರೆಹಳ್ಳಿ ನಂಜೆದೇವನಪುರ ಸೇರದಂತೆ ಹಲವು ಕೆರೆಗಳ ವ್ಯಾಪ್ತಿಯ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ.
ಬೇಸಿಗೆಯಲ್ಲಿ ಕಡಿಮೆಯಾಗದ ಅಂತರ್ಜಲ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭಗೊಂಡು ಸುಮಾರು ಹತ್ತು ವರ್ಷ ಕಳೆದಿದ್ದು, ವರ್ಷದ ಕೆಲವು ದಿನಗಳಲ್ಲಿ ಮಾತ್ರ ನೀರು ಹರಿಯುತ್ತಿತ್ತು. ಆದರೆ ಈ ವರ್ಷದ ಬೇಸಿಗೆಯಲ್ಲಿ ನೀರು ಹರಿದು ಬರುತ್ತಿದ್ದು, ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ. ಈ ಭಾಗದ ಜನ -ಜಾನುವಾರು ಮತ್ತು ಪಾಣಿಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿದ್ದುದು ಸಂತಸದ ವಿಷಯವೇ ಸರಿ.
ಮತ್ತಷ್ಟು ಕೆರೆಗಳಿಗೆ ವಿಸ್ತರಿಸಿದರೆ ಒಳಿತು: ಕೆರೆಗಳಿಂದ ಮುಂದಕ್ಕೆ ಹರಿಯುವ ಸನಿಹದಲ್ಲಿ, ಸಾಕಷ್ಟು ಸಣ್ಣಪುಟ್ಟ ಕೆರೆಗಳಿದ್ದು, ನೀರು ತುಂಬಿಸುವ ಕೆಲಸ ಮಾಡಬೇಕಾಗಿದೆ ಮತ್ತು ಇಂತಹ ಮತ್ತಷ್ಟು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಂದಿದ್ದು ತುಂಬಾ ಅನುಕೂಲಕರವಾಗಿದೆ. ಕಳೆದ ಬೇಸಿಗೆಯಲ್ಲಿ ಕೆರೆಗಳಿಗೆ ನೀರನ್ನು ನಿಲುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೆರೆಯು ಕೂಡ ಖಾಲಿಯಾಗಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ನೀರು ಬರುತ್ತಿರುವುದು ಬೋರ್ವೆಲ್ ಗಳಲ್ಲಿ ನೀರು ಕಡಿಮೆಯಾಗಿಲ್ಲ.
ಕೆ ಪಿ ಪ್ರಕಾಶ್, ರೈತ, ಕೋಣನೂರು ಗ್ರಾಮ.
