ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಾವುದೇ ಮೂಲಸೌಕರ್ಯ ಶುಲ್ಕವನ್ನು ವಿಧಿಸದೆ ಅಪಾರ್ಟ್ಮೆಂಟ್ಗಳಿಗೆ ಮತ್ತು ಬಡಾವಣೆಗಳಿಗೆ ಕಾವೇರಿ ನೀರು ಸಂಪರ್ಕವನ್ನು ನೀಡುತ್ತಿದೆ. ಆದರೆ, ಜೆಪಿ ನಗರ 8 ನೇ ಹಂತದ ಪಿಎಚ್‌ಎಸ್‌ನ ರಾಯಲ್ ಲೇಕ್‌ಫ್ರಂಟ್ ನಿವಾಸಿಗಳಿಗೆ ಕಾವೇರಿ ನೀರು ಸಂಪರ್ಕ ಒದಗಿಸಲು 2.3 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ರಾಯಲ್ ಲೇಕ್‌ಫ್ರಂಟ್ ಅಪಾರ್ಟ್ಮೆಂಟ್ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ.
ಏಪ್ರಿಲ್ 10 ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿ ನಿವಾಸಿಗಳು ಮತ್ತು ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ. ಆ ಮೂಲಕ ಜಲಮಂಡಳಿಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ.
ಜಲ ಮಂಡಳಿಯು ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿಯ ಸುತ್ತಮುತ್ತಲಿನ ಸ್ಥಳಗಳನ್ನು ಒಳಗೊಂಡಂತೆ ರೆವೆನ್ಯೂ ಮತ್ತು ‘ಬಿ-ಖಾತಾ’ ಲೇಔಟ್‌ಗಳ ನಿವಾಸಿಗಳಿಗೆ ಯಾವುದೇ ಮೂಲಸೌಕರ್ಯ ಶುಲ್ಕಗಳನ್ನು ವಿಧಿಸದೆಯೇ ಸಂಪರ್ಕ ಒದಗಿಸುತ್ತದೆ. ಆರ್‌ಎಲ್‌ಎಫ್ ಲೇಔಟ್ ನಮ್ಮ ಸುತ್ತಮುತ್ತಲಿನ ಜನರು ಬಳಸುವ ಉದ್ಯಾನವನಗಳಂತಹ ಸಾಮಾನ್ಯ ಮೂಲಸೌಕರ್ಯಗಳನ್ನು ಸಹ ಹೊಂದಿದೆ ಎಂದು ಪತ್ರದಲ್ಲಿ ನಿವಾಸಿಗಳು ಉಲ್ಲೇಖಿಸಿದ್ದಾರೆ.
ಬಿಡಿಎ ಅನುಮೋದಿತ ಲೇಔಟ್‌ಗಳಾದ ರಘುವನಹಳ್ಳಿಯ ಬಿಸಿಎಂಸಿ ಲೇಔಟ್, ನಾರಾಯಣನಗರ ಹಂತ 1 ಮತ್ತು ಹಂತ 2, ದೊಡ್ಡಕಲ್ಲಸಂದ್ರ, ಬಾಲಾಜಿ ಲೇಔಟ್, ವಾಜರಹಳ್ಳಿ, ಬಿಡಿಎ ನೌಕರರ ಬಡಾವಣೆ, ದೊಡ್ಡಕಲ್ಲಸಂದ್ರ ಮತ್ತು ಬಿಸಿಸಿ ಎಚ್‌ಎಸ್ ಲೇಔಟ್, ವಾಜರಹಳ್ಳಿ ಬಿಡಬ್ಲ್ಯುಎಸ್‌ಎಸ್‌ಬಿ ನೀರಿನ ಸಂಪರ್ಕದ ಪ್ರಯೋಜನ ಪಡೆದಿರುವುದು ನಮಗೆ ತಿಳಿದು ಬಂದಿದೆ. ಯಾವುದೇ ಮೂಲಸೌಕರ್ಯ ಶುಲ್ಕವನ್ನು ಪಾವತಿಸದೆ ಮತ್ತು ಇಂಡಿವಿಜುವಲ್ ಹೌಸ್ಗಳಿಗೆ ಕೇವಲ ಸಂಪರ್ಕ ಶುಲ್ಕ ಅಷ್ಟೇ ವಿಧಿಸಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಂಘವು ಪತ್ರದಲ್ಲಿ ತಿಳಿಸಿದೆ.
ನಾವು ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಆದರೆ, ಸದ್ಯ ಬೋರ್ವೆಲ್ಗಳು ಬತ್ತಿ ಹೋಗಿದ್ದು, ಖಾಸಗಿ ಟ್ಯಾಂಕರ್‌ಗಳ ಮೇಲೆ ಹೆಚ್ಚಿನ ದರ ನೀಡಿ ಅವಲಂಬಿತರಾಗಿದ್ದೇವೆ ಎಂದು ಸಂಘದ ಸದಸ್ಯರು ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಜಲ ಮಂಡಳಿಯ ನೀರಿನ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ. ನಮ್ಮ ಸಂಘದ ಮೂಲಕ ಆರ್‌ಎಲ್‌ಎಫ್ ನಿವಾಸಿಗಳು ಜಲ ಮಂಡಳಿ ಜತೆ ಕಾವೇರಿ ನೀರಿನ ಸಂಪರ್ಕಕ್ಕಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ನಮಗೆ 2.3 ಕೋಟಿ ರೂ. ವರೆಗೆ ಪಾವತಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜತೆಗೆ, ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಮಾತ್ರವಲ್ಲದೆ ಮುಂದಿನ ಚುನಾವಣೆಗಳನ್ನೂ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
