ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಸಿ.ಎನ್. ಮಂಜುನಾಥ್ ಅವರು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಡಾ.ಸಿ.ಎನ್. ಮಂಜುನಾಥ್ ಅವರು 1079002 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ 809355 ಮತಗಳನ್ನು ಪಡೆದಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ಅವರು ಡಿ.ಕೆ. ಸುರೇಶ್ ಅವರಿಗಿಂತ 269647 ಮತಗಳ ಅಂತರದಿಂದ ಜಯಶೀಲರಾದರು. ಕಣದಲ್ಲಿ 15 ಅಭ್ಯರ್ಥಿಗಳಿದ್ದರು. ನೋಟಾಗೆ 10649 ಮತಗಳು ಬಿದ್ದಿವೆ.
ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಿತು. ಕಾಲೇಜಿನ ಸುತ್ತಮುತ್ತ ಹಾಗೂ ಹೆದ್ದಾರಿ ರಸ್ತೆ ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾಲೇಜು ಹೊರ ಆವರಣದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡಲಾಯಿತು. ಅಭ್ಯರ್ಥಿಗಳು, ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಏಜೆಂಟರನ್ನು ಹೊರತು ಪಡಿಸಿ ಬೇರಾರಿಗೂ ಮತ ಎಣಿಕೆ ಕೇಂದ್ರದೊಳಕ್ಕೆ ಪ್ರವೇಶ ನೀಡಲಿಲ್ಲ. ಮಾಧ್ಯಮದವರಿಗೂ ಈ ನಿಯಮ ಕಡ್ಡಾಯಗೊಳಿಸಲಾಗಿತ್ತು.
ಕಾಲೇಜಿನ ಆವರಣಕ್ಕೆ ಆಗಮಿಸಿದ ಜನರು ಚುನಾವಣಾ ಫಲಿತಾಂಶದ ಬಗ್ಗೆ ಗುಂಪು ಗುಂಪಾಗಿ ಮಾತನಾಡಿಕೊಳ್ಳುತ್ತಿದ್ದರು. ಪ್ರತಿ ಸುತ್ತಿನ ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಿದಾಗ ನೆರೆದಿದ್ದ ಕಾರ್ಯಕರ್ತರು ತಮ್ಮ ಪಕ್ಷ ಹಾಗೂ ಅಭ್ಯರ್ಥಿ ಹೆಸರನ್ನು ಹೇಳುವ ಮೂಲಕ ಜೋರಾಗಿ ಘೋಷಣೆಗಳನ್ನು ಕೂಗಿ, ಸಂಭ್ರಮಿಸಿದರು.
ಮತ ಎಣಿಕೆಯ ಕೇಂದ್ರದ ಮುಂಭಾಗ ಜೆಡಿಎಸ್-ಬಿಜೆಪಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆರಳೆಣಿಕೆಯಷ್ಟು ಇದ್ದರಾದರೂ ತಟಸ್ಥರಾಗಿದ್ದರು.
ಹಲವು ಮಂದಿ ಧ್ವನಿವರ್ಧಕದ ಮೂಲಕ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ಅದನ್ನು ಮೊಬೈಲ್ ಮೂಲಕ ಇತರರಿಗೆ ತಿಳಿಸುತ್ತಿದ್ದರು. ಇನ್ನು ಕೆಲವರು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ಮೊಬೈಲ್‌ಗಳಲ್ಲಿ ಮುಳುಗಿ ಹೋಗಿದ್ದರು. ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬುದೆ ಚರ್ಚೆಯ ವಿಷಯವಾಗಿತ್ತು.
ಮಧ್ಯಾಹ್ನ 3 ಗಂಟೆ ವೇಳೆಗೆ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಲೇಜಿನ ಆವರಣದಿಂದ ಎಲ್ಲರೂ ಎಲ್ಲಿ ಮತ ಜಾಸ್ತಿ ಬಂದಿದೆ, ಕಡಿಮೆ ಬಂದಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದರು. ಮತ ಎಣಿಕೆಯ ಪ್ರಾರಂಭ ಹಂತದಿಂದಲೂ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮುನ್ನಡೆ ಸಾಧಿಸುತ್ತಾ ಬಂದರು. ಮಂಜುನಾಥ್ ಅವರ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು.
ಕ್ಷೇತ್ರ ಡಾ.ಸಿ.ಎನ್. ಮಂಜುನಾಥ್ ಡಿ.ಕೆ. ಸುರೇಶ್
ಕುಣಿಗಲ್ 97248 73410
ರಾಜರಾಜೇಶ್ವರಿನಗರ 188726 89729
ಬೆಂಗಳೂರು ದಕ್ಷಿಣ 255756 158627
ಆನೆಕಲ್ 137693 115328
ಮಾಗಡಿ 113911 83938
ರಾಮನಗರ 91945 92090
ಕನಕಪುರ 83303 108980
ಚನ್ನಪಟ್ಟಣ 106971 85357
ಅಂಚೆ ಮತಗಳು 3449 1896
ಒಟ್ಟು ಮತಗಳು 1079002 809355
ಅಭ್ಯರ್ಥಿ ಪಕ್ಷ ಪಡೆದ ಮತಗಳು
ಡಾ.ಸಿ.ಎನ್. ಮಂಜುನಾಥ್ ಬಿಜೆಪಿ 1079002
ಡಿ.ಕೆ. ಸುರೇಶ್ ಕಾಂಗ್ರೆಸ್ 809355
ಅಭಿಷೇಕ್.ಕೆ ಉತ್ತಮ ಪ್ರಜಾಕೀಯ ಪಾರ್ಟಿ 6202
ಸುರೇಶ್ ಎಂ.ಎನ್. ಪಕ್ಷೇತರ ಅಭ್ಯರ್ಥಿ 3236
ಹೇಮಾವತಿ .ಕೆ ಸೋಷಿಯಲಿಸ್ಟ್ ಯುನಿಟಿ ಸೆಂಟರ್ 1774
ಆಫ್ ಇಂಡಿಯಾ (ಕಮ್ಯುನಿಸ್ಟ್)
ಜೆ.ಟಿ. ಪ್ರಕಾಶ್ ಪಕ್ಷೇತರ ಅಭ್ಯರ್ಥಿ 1472
ಎನ್. ಕೃಷ್ಣಪ್ಪ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ 1402
ಸಿ.ಎನ್. ಮಂಜುನಾಥ್ ಬಹುಜನ್ ಭಾರತ್ ಪಾರ್ಟಿ 1400
ಕುಮಾರ್. ಎಲ್ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ 1066
ಮಹಮದ್ ಮುಸದಿಕ್ ಪಾಷಾ ಕರ್ನಾಟಕ ರಾಷ್ಟ್ರ ಸಮಿತಿ 821
ನರಸಿಂಹಮೂರ್ತಿ.ಜೆ.ಪಿ. ಪಕ್ಷೇತರ ಅಭ್ಯರ್ಥಿ 813
ಸುರೇಶ್. ಎಸ್. ಕರುನಾಡು ಪಾರ್ಟಿ 798
ವಸಿಸ್ಟ್. ಜೆ. ಕಂಟ್ರಿ ಸಿಟಿಜನ್ ಪಾರ್ಟಿ 584
ಮೊಹಮ್ಮದ್ ದಸ್ತಗೀರ್ ಯಂಗ್ ಸ್ಟರ್ ಎಂಪಾವರ್ಮೆಂಟ್ ಪಾರ್ಟಿ 486
ಎಚ್.ವಿ. ಚಂದ್ರಶೇಖರ್ ವಿಡುತಲೈ ಚಿರುತೈಗಲ್ ಕಚ್ಚಿ 480
ನೋಟಾ 10649
ಒಟ್ಟು 1919540


