ಮೈಸೂರು, ಫೆಬ್ರವರಿ 18, 2026 :ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರದ ಕುರಿತಾದ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಶಾಸಕರನ್ನು ಉದ್ದೇಶಿಸಿ ನೀಡಿದ್ದರೆನ್ನಲಾದ ‘ಬೀದಿ ನಾಯಿ’ಗಳ ಹೇಳಿಕೆ ಇದೀಗ ಸ್ವಪಕ್ಷದಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ಈ ವಿವಾದಾತ್ಮಕ ಹೇಳಿಕೆಯ ವಿರುದ್ಧ ಮೈಸೂರು ನಗರ ಕಾಂಗ್ರೆಸ್ ವಕ್ತಾರ ಶ್ರೀನಿವಾಸ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಅವರು, ಸಚಿವ ಮಹದೇವಪ್ಪ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ನಾಯಕರು, ಆದರೆ ಅವರಿಂದ ಇಂತಹ ಕೀಳುಮಟ್ಟದ ಹೇಳಿಕೆಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜನರಿಂದ ನೇರವಾಗಿ ಚುನಾಯಿತರಾಗಿ ಬಂದಿರುವ ಶಾಸಕರನ್ನು ಪರೋಕ್ಷವಾಗಿ ಬೀದಿ ನಾಯಿಗಳಿಗೆ ಹೋಲಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಸಚಿವರ ಈ ಮಾತಿನಿಂದ ರಾಜ್ಯದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಬಲವಾಗಿ ಸಮರ್ಥಿಸಿಕೊಂಡ ಶ್ರೀನಿವಾಸ್, ಕಳೆದ ಏಳು ವರ್ಷಗಳಿಗೂ ಹೆಚ್ಚು ಕಾಲದಿಂದ ಡಿಕೆಶಿ ಅವರು ಹಗಲಿರುಳು ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದಾರೆ. ತೆಲಂಗಾಣದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಶ್ರಮ ಅಪಾರವಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಎದುರಾದಾಗ ‘ಟ್ರಬಲ್ ಶೂಟರ್’ ಆಗಿ ನಿಂತು ಸಮಸ್ಯೆ ಬಗೆಹರಿಸುವ ಶಕ್ತಿ ಅವರಿಗಿದೆ. ನಮಗೆಲ್ಲರಿಗೂ ಮಾದರಿಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂಬುದು ಕಾರ್ಯಕರ್ತರ ಆಶಯವಾಗಿದೆ ಎಂದು ಪ್ರತಿಪಾದಿಸಿದರು.
