ಮಾದಿಗ ದಂಡೋರ ರಾಜ್ಯಾಧ್ಯಕ್ಷ ಎಂ.ಸಿ.ಶ್ರೀನಿವಾಸ್ ಹೇಳಿಕೆ
ಚಿಕ್ಕಬಳ್ಳಾಪುರ: ಸರ್ವಾಧಿಕಾರಿ ಧೊರಣೆಯ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ನಿರ್ಣಯಗಳನ್ನು ಕೈಗೊಳ್ಳುವ ಜತೆಗೆ ಶೋಷಿತ ಸಮುದಾಯಗಳನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಸುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಾದಿಗ ದಂಡೋರ ಕಾಂಗ್ರೆಸ್‌ಗೆ ತನ್ನ ಬೆಂಬಲ ನೀಡುವುದಾಗಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಎಂ.ಸಿ.ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಶೋಷಿತ ಸಮುದಾಯಗಳ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ದೇಶದ ಶಾಂತಿ ಸುವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದುರಾಡಳಿತ ನಡೆಸುತ್ತಿದೆ. ತನ್ನ ಜನವಿರೋಧಿ ಧೋರಣೆಗಳಿಂದ ಜನಸಮಾನ್ಯ ಬದುಕು ಬೀದಿಪಾಲಾಗಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದರು.
ಹಲವು ಭರವಸೆಗಳನ್ನು ಈಡೇರಿಸುವುದಾಗಿ ಅಧಿಕಾರಕ್ಕೆ ಬಂದ ಬಳಿಕ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಲಾಗಿದೆ. ಆದರೆ ಅಂಬಾನಿ, ಅದಾನಿ ಸೇರಿದಂತೆ ಇನ್ನಿತರೆ ಶ್ರೀಮಂತರು ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಸಾಲದೆಂಬಂತೆ ದೇಶದ ಜನತೆಗೆ ಸಮಾನ ಅವಕಾಶಗಳನ್ನು ಕಲ್ಪಿಸಿರುವ ಸಂವಿಧಾನ ಬದಲವಾಣೆಯ ಮಾತುಗಳನ್ನಾಡುತ್ತಿರುವುದು ಆತಂಕಕಾರಿ ವಿಚಾವಾಗಿದೆ ಎಂದು ನುಡಿದರು.
ಕೇವಲ ಕೆಲ ಸಮುದಾಗಳನ್ನು ಓಲೈಕೆಗೆ ಮುಂದಾಗಿರುವ ಬಿಜೆಪಿ ಸರ್ಕಾರದಿಂದ ದೇಶದ ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಎಂಬುದು ಅಸಾಧ್ಯದ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ, ಜನರು ಸಹಬಾಳ್ವೆಯೊಂದಿಗೆ ಎಲ್ಲ ರಂಗಗಳಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಾಗಿರುವುದರಿಂದ ಸಮಿತಿಯು ಕಾಂಗ್ರೆಸ್ ತನ್ನ ಬೆಂಬಲ ಸೂಚಿಸಿ, ಕೈ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದೆ ಎಂದು ಹೇಳಿದರು.
ಸಮಿತಿಯ ವೀಣಾರಾಮು, ರಾಮಕೃಷ್ಣಪ್ಪ, ಜಿ.ಗೋಪಾಲ್, ಎಚ್.ರಂಗನಾಥ್, ಸುರೇಶ್, ಮುನೇಂದ್ರ, ದಾಸ್ ಇದ್ದರು.

