ಕೋಲಾರ; ರೈತರ ಹೈನೋದ್ಯಮದ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಸಹಕಾರ ಸಚಿವರು ನಿಲ್ಲಬೇಕೆಂದು ರೈತ ಸಂಘದಿಮನದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರಾಜ್ಯದಲ್ಲಿ ಒಟ್ಟು ೧೪ ಹಾಲು ಒಕ್ಕೂಟಗಳಿದ್ದು, ಇದರಲ್ಲಿ ೩೫ ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ ೨೪ ಲಕ್ಷ ಮಂದಿ ನೊಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ನಿತ್ಯ ೯ ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಿಲಿ ಎಂಬ ಕಾರಣದಿಂದ ಕ್ಷೀರದಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೆ ಲೀಟರ್‌ಗೆ ೫ ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದು, ಈಗ ಆ ಹಣವನ್ನು ಬಿಡುಗಡೆ ಮಾಡದೆ ಸಂಕಷ್ಟದಲ್ಲಿ ಹಾಲು ಉತ್ಪಾದಕರು ಸಿಲುಕಿದ್ದಾರೆಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರೈತರ ಹಾಲು ಉತ್ಪಾದನೆಯು ಪ್ರಸ್ತುತದಲ್ಲಿ ಕಷ್ಟಕರವಾಗಿದೆ. ಸ್ವಂತ ಮೇವಿನ ವ್ಯವಸ್ಥೆ ಇದ್ದಲ್ಲಿ ಪ್ರತಿ ಲೀಟರ್‌ಗೆ ೨೨ ರಿಂದ ೨೪ ರೂ. ವೆಚ್ಚವಾಗುತ್ತಿದೆ. ಮೇವು ಖರೀದಿಸಿದರೆ ೩೦ ರೂ ದಾಟುತ್ತದೆ. ಜೊತೆಗೆ ಖಾಸಗಿ ಅಂಗಡಿ ಮಾಲೀಕರು ಇಂಡೀ ಬೂಸವನ್ನು ತಮಗೆ ಇಷ್ಟಬಂದ ರೀತಿ ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ರೈತರಿಗೆ ತುಂಬಾ ತೊಂದರೆಯಲ್ಲಿದ್ದಾರೆ. ಸರ್ಕಾರ ಕೂಡಲೇ ಸ್ಪಂಧಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪ್ರೋತ್ಸಾಹ ಧನದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ರೈತರ ರಕ್ಷಣೆಗೆ ನಿಲ್ಲುವ ಭರವಸೆಯನ್ನು ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೇಶವ, ಶೈಲಜ, ಮುನಿರತ್ನಮ್ಮ, ವೆಂಕಟಮ್ಮ, ನಾಗರತ್ನ ಉಪಸ್ಥಿತರಿದ್ದರು.

