ರಾಮನಗರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ । ಪ್ರತಿಕೃತಿಗೆ ಸಿಡಿ ಹಾರ
ರಾಮನಗರ : ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಐಜೂರು ವೃತ್ತದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು-ಮೈಸೂರು ರಸ್ತೆ ನಡೆಸಿದ ಪ್ರತಿಭಟನಾಕಾರರು ಸುಮಾರು ಒಂದುವರೆ ಗಂಟೆಗಳ ವಾಹನಗಳನ್ನು ತಡೆದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಡಿ.ಕೆ. ಶಿವಕುಮಾರ್ ಭಾವಚಿತ್ರವಿದ್ದ ಪ್ರತಿಕೃತಿಗೆ ಸಿಡಿ ಹಾರ ಹಾಕಿ ಚಪ್ಪಲಿಯಿಂದ ಹೊಡೆದು, ಪ್ರತಿಕೃತಿಗೆ ಬೆಂಕಿ ಹಚ್ಚಿದರು.
ಪ್ರತಿಭಟನಾಕಾರರು ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ವಾಕ್ಸಮರ ನಡೆಯಿತು. ಪೊಲೀಸರ ವಿರೋಧದ ನಡುವೆಯೂ ಪ್ರತಿಭಟನಾಕಾರರು ಪ್ರತಿಕೃತಿಗೆ ಬೆಂಕಿ ಹಚ್ಚಿದರಲ್ಲದೆ ಡಿಕೆಶಿ ಭಾವಚಿತ್ರವಿರುವ 200ಕ್ಕೂ ಹೆಚ್ಚು ಫಲಕಗಳನ್ನು ಅದರಲ್ಲಿ ಹಾಕಿ ದಹಿಸಿದರು.
ತಕ್ಷಣ ಪೊಲೀಸರು ಬೆಂಕಿ ನಂದಿಸಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಮೂರು ಕಡೆ ಫಲಕಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪೆನ್ ಡ್ರೈವ್ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್ : ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ ಡಿಕೆ ಬ್ರದರ್ಸ್ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ತೇಜೋವಧೆಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವನ್ನು ಬೇರ್ಪಡಿಸಲು ಹುನ್ನಾರ ಮಾಡುತ್ತಿದ್ದಾರೆ. ಇಡೀ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ವಿಚಾರವನ್ನು ನಾವೂ ಖಂಡಿಸುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಆದರೆ ಸಂತ್ರಸ್ತೆಯರ ವಿಡಿಯೋಗಳನ್ನು ಹಂಚಿಕೆ ಮಾಡಿರುವುದು ಎಷ್ಟು ಸರಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಈ ಕೃತ್ಯ ಮಾಡಿದ್ದಾರೆ. ಅವರು ಬಾಲ್ಯದಲ್ಲಿ ಮಾಡುತ್ತಿದ್ದ ಕೆಲಸವನ್ನ ಮುಂದುವರೆಸಿದ್ದಾರೆ. ಹಿಂದೆ ಟೆಂಟ್ ನಲ್ಲಿ ಸಿನಿಮಾ ತೋರಿಸುತ್ತಿದ್ದ ಪ್ರವೃತ್ತಿ ಮುಂದುವರೆಸಿದ್ದಾರೆ ಎಂದರು.
ಹೆಣ್ಣು ಮಕ್ಕಳ ಗೌರವವನ್ನು ಹಾಳು ಮಾಡಿದ್ದಾರೆ. ಡಿಸಿಎಂ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಡಿ.ಕೆ. ಶಿವಕುಮಾರ್ ಗಿಲ್ಲ. ಡಿ.ಕೆ. ಶಿವಕುಮಾರ್ ಕೂಡಲೇ ರಾಜೀನಾಮೆ ಕೊಟ್ಟು ಹೊರಬರಬೇಕು. ಇಡೀ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ : ಆ ನಂತರ ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ನೇತೃತ್ವದಲ್ಲಿ ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹಾಗೂ ಪೊಲೀಸ್ ಭವನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ರವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರ ವಿರುದ್ಧ ಪ್ರಯಾಣಿಕರ ಆಕ್ರೋಶ : ಈ ಪ್ರತಿಭಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
ಬಿಸಿಲ ಬೇಗೆ ಹೆಚ್ಚಾಗಿದ್ದರಿಂದ ವಾಹನಗಳಲ್ಲಿ ಕುಳಿತುಕೊಳ್ಳಲಾಗದೆ ಸವಾರರು, ಪ್ರಯಾಣಿಕರು ಪರದಾಡಿದರು. ಕೊನೆಗೆ ಮಹಿಳಾ ಪ್ರಯಾಣಿಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಮಹಿಳಾ ಪ್ರಯಾಣಿಕರನ್ನು ಸಮಾಧಾನ ಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಜಯಮುತ್ತು, ನಾಗರಾಜು, ಸೋಮೇಗೌಡ, ವಿ. ನರಸಿಂಹಮೂರ್ತಿ, ರವಿ, ರಾಜಶೇಖರ್, ಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಪುಷ್ಪಾಲತಾ, ಸಂಜಯ್ ಪದಂ ಇತರರು ಇದ್ದರು.

