ಮೈಸೂರು, ಫೆಬ್ರವರಿ 18, 2026: ಸರ್ಕಾರಿ ಕಚೇರಿಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸಿ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಗಮಗೊಳಿಸುವಂತೆ ಕ್ರೆಡಾಯ್ ಪದಾಧಿಕಾರಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೆಡಾಯ್ ಪ್ರಮುಖರು, ಇ-ಖಾತಾ ಅನುಷ್ಠಾನದಲ್ಲಿ ಎದುರಾಗಿರುವ ತಾಂತ್ರಿಕ ವೈಫಲ್ಯದಿಂದಾಗಿ ಅಭಿವೃದ್ಧಿಪಡಿಸುವವರು ಮಾತ್ರವಲ್ಲದೆ ಸಾಮಾನ್ಯ ಗ್ರಾಹಕರು ಮತ್ತು ಮನೆ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇ-ಖಾತೆ ಮಾಡಿಸಲು ಕಚೇರಿಗಳಿಗೆ ಭೇಟಿ ನೀಡಿದರೆ ಸರ್ವರ್ ಡೌನ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳ ನೆಪ ಹೇಳಲಾಗುತ್ತಿದೆ. ಈ ದೋಷಗಳನ್ನು 15 ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಲಾಗಿದ್ದರೂ, 20 ದಿನ ಕಳೆದರೂ ಯಾವುದೇ ಸುಧಾರಣೆ ಕಂಡಿಲ್ಲ. ಇದರಿಂದಾಗಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇದರೊಂದಿಗೆ ಕೇಂದ್ರ ಮೌಲ್ಯಮಾಪನದಿಂದ (CVC) ದರ ನಿಗದಿಪಡಿಸುವ ಕಾರ್ಯವೂ ವಿಳಂಬವಾಗುತ್ತಿದ್ದು, ಹಳೆಯ ಬಡಾವಣೆಗಳಿಗೆ ಸಿವಿಸಿ ದರ ನಿಗದಿ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೆಡಾಯ್ ಮೈಸೂರು ವಲಯದ ಅಧ್ಯಕ್ಷ ಹರೀಶ್ ಶೆಣೈ ಅವರು, ಒಮ್ಮೆ ಅಧಿಕೃತವಾಗಿ ನೋಂದಾಯಿತವಾದ ಜಿಪಿಎಗೆ ಪ್ರತಿ ವಹಿವಾಟಿಗೂ ಪದೇ ಪದೇ ಜೀವಂತ ಪ್ರಮಾಣ ಪತ್ರ ಕೇಳುವ ನಿಯಮವು ಹಿರಿಯ ನಾಗರಿಕರು ಮತ್ತು ಅನಿವಾಸಿ ಭಾರತೀಯರಿಗೆ (NRI) ದೊಡ್ಡ ಹೊರೆಯಾಗಿದೆ. ಈ ನಿಯಮವನ್ನು ಕೂಡಲೇ ರದ್ದುಗೊಳಿಸಿ ಈ ಹಿಂದೆ ಇದ್ದ ಸರಳ ನಿಯಮವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕ್ರೆಡಾಯ್ ಮೈಸೂರು ವಲಯದ ಚೇರ್ಮನ್ ಶ್ರೀಹರಿ ಅವರು ಮಾತನಾಡಿ, ಈಗಾಗಲೇ ನೋಂದಾಯಿತವಾಗಿರುವ ಜಿಪಿಎಗೆ ಮಾನ್ಯತೆ ನೀಡಬೇಕು ಮತ್ತು ಉಪ-ನೋಂದಣಾಧಿಕಾರಿಗಳ ಮಾರ್ಗಸೂಚಿ ಆಧಾರದ ಮೇಲೆ ಸರಳವಾಗಿ ನೋಂದಣಿ ಪ್ರಕ್ರಿಯೆ ನಡೆಯಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರೆಡಾಯ್ ಮೈಸೂರು ವಲಯದ ಕಾರ್ಯದರ್ಶಿ ನಾಗರಾಜ್ ವಿ. ಬೈರಿ, ಉಪಾಧ್ಯಕ್ಷ ಅರುಣ್ ಪಂಡಿತ್ ಹಾಗೂ ಸದಸ್ಯ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.
