ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯನ್ನಾಗಿ ಎಂ.ಪಿ.ಮುನಿವೆಂಕಟಪ್ಪ ಅವರನ್ನು ಘೋಷಣೆ ಮಾಡಿದ ಪಕ್ಷದ ಕಾರ್ಯದರ್ಶಿ ಯು.ಬಸವರಾಜ್, ರಾಜ್ಯದಲ್ಲಿ ೨೮ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾತ್ರ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷ ಜೆಡಿಎಸ್ ಅನ್ನು ಸೋಲಿಸಲು ಪಕ್ಷವು ತೀರ್ಮಾನಿಸಿದೆ. ಕೇಂದ್ರ ಸಮಿತಿ ಅನುಮತಿಯ ಮೇರೆಗೆ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನಾಗಿ ಎಂ.ಪಿ.ಮುನಿವೆಂಕಟಪ್ಪರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಜನತೆ ನೀಡಿದ್ದ ಆಶ್ವಾಸನೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಂವಿಧಾನ ಆಧಾರ ಸ್ಥಂಭಗಳ ಮೇಲೆ ದಾಳಿ ನಡೆಸಿ ಸರ್ವಾಧಿಕಾರದ ಕಡೆಗೆ ಆಡಳಿತವನ್ನು ಕೊಂಡೊಯ್ಯಲಾಗುತ್ತಿದೆ. ಇದು ಆರ್ಥಿಕ ಸಾರ್ವಭೌಮತ್ವದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಜಾತ್ಯಾತೀತ ಪ್ರಜಾಪ್ರಭುತ್ವದ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದರು.
ಕಳೆದ ೧೦ ವರ್ಷಗಳಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಲ್ಲದೆ ದಲಿತರು, ಮಹಿಳೆಯರು ಹಾಗೂ ಅಲ್ಪಂಸಂಖ್ಯಾತರ ಮೇಲೆ ನಿರಂತರ ದಬ್ಬಾಳಿಕೆ, ಕೊಲೆಗಳು ನಡೆಯುತ್ತಿದೆ. ಇದರಿಂದ ದೇಶವು ಸಂಕಷ್ಟದ ಸ್ಥಿತಿಗೆ ತಲುಪಿದ್ದು, ಇದನ್ನು ತಪ್ಪಿಸಲು ಜನರಪರ ಧ್ವನಿ ಎತ್ತುವ ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸಿ, ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕೆಂದು ಹೇಳಿದರು.
ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಜನರ ಸಮಸ್ಯೆಗಳನ್ನು ಗಾಳಿಗೆ ತೂರಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಟಿಕೆಟ್‌ಗಾಗಿ ಅನಾರೋಗ್ಯಕರ ರಾಜಕಾರಣದಲ್ಲಿ ನಿರತರಾಗಿರುವುದು ದುರಂತವಾಗಿದ್ದು, ಜನತೆ ಮೋದಿಯ ಹೆಸರಿನಲ್ಲಿ ಪದೇ ಪದೇ ಮೋಸಹೋಗದೆ ಶ್ರಮಿಜೀವಿಗಳ ಪರ ನಿರಂತರ ಧ್ವನಿ ಎತ್ತುವ ಜನರ ಕಾವಲು ನಾಯಿಯಂತೆ ಕಾರ್ಯನಿರ್ವಹಿಸುವ ಸಿಪಿಎಂಗೆ ಬೆಂಬಲಿಸಲು ಕೋರಿದರು.
ಶ್ರೀರಾಮರೆಡ್ಡಿ, ಜಯರಾಮರೆಡ್ಡಿ, ಸಿದ್ದಗಂಗಪ್ಪ, ಕೆ.ನಾಗರಾಜ್, ಜಿ.ಸಿ.ಶ್ರೀನಿವಾಸ್, ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ, ಟಿ.ವೆಂಕಟರಾಜು, ಆದಿನಾರಾಯಣಸ್ವಾಮಿ, ಲಕ್ಷ್ಮೀ ನಾರಾಯಣರೆಡ್ಡಿ, ಮುನಿಯಪ್ಪ ಇದ್ದರು.
ಬಾಕ್ಸ್
ನ್ಯಾಯಾಂಗ ತನಿಖೆಗೆ ಒತ್ತಾಯ: ಬಿಜೆಪಿ ಭಾರಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಪಡೆದಿರುವುದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬರಹಿರಂಗವಾಗಿರುವುದು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಅಸಲಿಮುಖ ಅನಾವರಣಗೊಂಡಿದ್ದು, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಲವಂತದಿಂದ ಮಾಡಿಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ದೊಡ್ಡ ಹಗರಣವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಒಳಪಡಿಸಬೇಕೆಂದು ಯು.ಬಸವರಾಜ್ ಒತ್ತಾಯಿಸಿದರು. ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ಕುರಿತು ಧ್ವನಿ ಎತ್ತುವವರನ್ನು ಮಣಿಸಲು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸೋಲಿನ ಭೀತಿಯಿಂದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಮಾಡಿರುವುದು ಖಂಡನೀಯ. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

