ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ನಿಯಂತ್ರಿಸಲು ಅಗತ್ಯ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚುವರಿ ವೆಚ್ಚ ಮಾಡದೆ ಡಬ್ಬಲ್ ವೇ ಮಾದರಿ ಮೆಟ್ರೋ ಮಾರ್ಗ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ತನ್ಮೂಲಕ ಮೆಟ್ರೋ ಮಾರ್ಗದ ಪಕ್ಕದಲ್ಲೇ ಎಲಿವೇಟೆಡ್ ರಸ್ತೆ ಅನುಷ್ಠಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದರಡಿ ಮೆಟ್ರೋ ಮಾರ್ಗವನ್ನು ಮೇಲ್ಸೇತುವೆಗಳ ಮೇಲೆ ನಿರ್ಮಾಣ ಮಾಡಲಾಗುವುದು. ಯೋಜನೆಗೆ ತಗಲುವ ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಸಂಸ್ಥೆಗಳು ಹಂಚಿಕೊಳ್ಳಬಹುದು. ಅದರಿಂದ ಭೂಸ್ವಾಧೀನ ಹಾಗೂ ರಸ್ತೆ ನಿರ್ಮಾಣಕ್ಕೆ ಆಗುವ ಹೆಚ್ಚುವರಿ ವೆಚ್ಚವೂ ತಪ್ಪಲಿದ್ದು, ಶೀಘ್ರದಲ್ಲಿ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ರಾಜಕಾಲುವೆಯ ಬಫರ್ ಜೋನಲ್ಲಿ ರಸ್ತೆ ನಿರ್ಮಾಣ
ಮತ್ತೊಂದೆಡೆ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ತುಂಬಾ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಮಳೆ ನೀರುಗಾಲುವೆಗಳ ಅಕ್ಕಪಕ್ಕದ 50 ಮೀ. ಜಾಗದಲ್ಲಿನ ಕಟ್ಟಡಗಳ ನಿರ್ಮಾಣ ನಿಷೇಧಿಸಲ್ಪಟ್ಟಿರುವ ಬಫರ್ ಜೋನ್ ಸ್ಥಳದಲ್ಲಿ (ನಿರ್ಬಂಧಿತ ವಲಯ) ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಕಾಲುವೆಗಳ ಬಫರ್ ಜೋನ್ ಒತ್ತುವರಿ ತಡೆಯುವ ಜತೆಗೆ ರಸ್ತೆಗಳ ನಿರ್ಮಾಣಕ್ಕೆ ಅನಗತ್ಯ ಭೂಸ್ವಾಧೀನ ತಪ್ಪಿಸಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಾಸ್ತವದಲ್ಲಿ ರಾಜಕಾಲುವೆ ಪಕ್ಕದಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಾಣ ಮಾಡಿದ್ದರೆ, ಅಂತಹ ಕಟ್ಟಡಗಳಿಗೆ ಟಿಡಿಆರ್ ನೀಡಿ ವಶಕ್ಕೆ ಪಡೆದು ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಭಾರೀ ವಾಹನಗಳು ಓಡಾಡಲು ಸಾಧ್ಯವಾಗದಿದ್ದರೂ, ದ್ವಿಚಕ್ರ ವಾಹನಗಳು ಓಡಾಡುವಷ್ಟು ರಸ್ತೆ ನಿರ್ಮಿಸಲಾಗುವುದು. ಪ್ರಾಯೋಗಿಕವಾಗಿ ಮಹದೇವಪುರ ವಲಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಅದರಿಂದ ರಾಜಕಾಲುವೆಯಲ್ಲಿ ನೀರು ತುಂಬಿ ಹೊರ ಚೆಲ್ಲಿದರೂ, ಅದರಿಂದ ಮನೆಗಳಿಗೆ ನೀರು ಹರಿಯುವುದು ತಪ್ಪುತ್ತದೆ ಹಾಗೂ ಪ್ರವಾಹ ಪರಿಸ್ಥಿತಿಯೂ ಉಂಟಾಗುವುದಿಲ್ಲ ಎಂದು ಹೇಳಿದರು.
ಪೆರಿಫೆರಲ್ ರಸ್ತೆ ನಿರ್ಮಾಣ ಖಚಿತ
ಬೆಂಗಳೂರು ಗ್ಲೋಬಲ್ ಸಿಟಿ. ಇದಕ್ಕೆ ರಸ್ತೆ, ಚರಂಡಿ ನಿರ್ಮಾಣ ಮಾಡುವುದರಿಂದ ಇಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬೆಂಗಳೂರಿನ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆ ನಿವಾರಿಸಬೇಕಿದೆ. ಇದಕ್ಕಾಗಿ ಬೆಂಗಳೂರು ನಗರಕ್ಕೆ ಮೊಬಿಲಿಟಿ ಪ್ಲಾನ್ ನೀಡಲು ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಎರಡು ಸಂಸ್ಥೆಗಳು ಆಯ್ಕೆಯಾಗಿವೆ. ನಗರದ ಕೇಂದ್ರ ಭಾಗದಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿವಾರಿಸಲು ದೂರದೃಷ್ಟಿಯ ಯೋಜನೆ ಸಿದ್ದಗೊಳ್ಳಲಿದೆ. ಶಾಶ್ವತ ಪರಿಹಾರ ನೀಡುವ ದೃಷ್ಟಿಕೋನದಿಂದ ಕಾರ್ಯಪ್ರವೃತ್ತವಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್
ಇದರ ಜತೆಗೆ ಶತಾಯ ಗತಾಯ ಫೆರಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಈ ಯೋಜನೆ ರೂಪಿಸಿದಾಗ ಅಂದಾಜಿಸಿದ್ದ ವೆಚ್ಚಕ್ಕಿಂತ ಹೆಚ್ಚು ಮೊತ್ತ ಆಗುವ ಸಾಧ್ಯತೆಯಿದೆ. ಆ ರೀತಿಯಾದರೂ ಚಿಂತಿಸದೇ ಯೋಜನೆ ಅನುಷ್ಠಾನಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ)ಗಳಿಂದ ಸಮಸ್ಯೆ ಉಂಟಾಗುತ್ತಿದೆ. ಮಾಧ್ಯಮಗಳು ಬೆಂಬಲ ನೀಡಿದರೆ, ಎಲ್ಲೆಂದರಲ್ಲಿ ಒಎಫ್‌ಸಿ ಅಳವಡಿಸುವುದನ್ನು ನಿಲ್ಲಿಸಲಾಗುವುದು ಎಂದರು.
ಸಮರ್ಪಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಕ್ರಮ
ಬಿಬಿಎಂಪಿಯಿಂದ ಸಂಗ್ರಹಿಸಲಾಗುತ್ತಿರುವ ಆಸ್ತಿ ತೆರಿಗೆ ವಾರ್ಷಿಕ ಪ್ರಮಾಣ ಕೇವಲ ₹3.5 ಸಾವಿರ ಕೋಟಿ ಮಾತ್ರ. ಆ ಪ್ರಮಾಣ ದುಪ್ಪಟ್ಟಾಗಬೇಕು, ಅಂದರೆ ₹7 ಸಾವಿರ ಕೋಟಿಗೆ ಹೆಚ್ಚಳವಾಗಬೇಕು. ಅದಕ್ಕಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ. ಬದಲಿಗೆ ತೆರಿಗೆ ಪಾವತಿಸದವರನ್ನು ಗುರುತಿಸಿ, ಅವರಿಂದ ತೆರಿಗೆ ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
