
ತುಮಕೂರು: ಕಾಂಗ್ರೆಸ್‍ನವರು ದಲಿತರ ಸಮಾಧಿಯ ಮೇಲೆ ಕುಳಿತು ಅಧಿಕಾರ ನಡೆಸುತ್ತಿದ್ದಾರೆ. ಮತಬ್ಯಾಂಕಿಗಾಗಿ ದಲಿತರನ್ನು ಓಲೈಸುವ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಆಪಾದಿಸಿದರು.
ದಲಿತರಿಗೆ ಮೀಸಲಾದ 25 ಸಾವಿರಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡು ದಲಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿರೂ.ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲಿತ ವಿರೋಧಿ ನೀತಿ ಮುಂದುವರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಎಸ್ಸಿ ಸಮುದಾಯಕ್ಕೆ ಶೇ.2ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ಹೆಚ್ಚಿಸಿದ್ದು ರಾಜ್ಯದ ಬಿಜೆಪಿ ಸರ್ಕಾರ.ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯಿಂದ ಅಲ್ಲಿನ ದಲಿತರು ಆಡಳಿತ ಸೇವೆಗಳಿಗೆ ಸೇರಲು ಸಹಾಯವಾಗಿದೆ.ಅವರಿಗೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಭಾಗವಹಿಸುವ ಹಕ್ಕು ದೊರಕಿದೆ.ಇದು ಪ್ರಧಾನಿ ನರೇಂದ್ರ ಮೋದಿಯವರಬಿಜೆಪಿ ಸರ್ಕಾರ ದಲಿತರಿಗೆ ಮಾಡಿಕೊಟ್ಟ ಅವಕಾಶ ಎಂದು ಹೇಳಿದರು.
ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್ ಮಾತನಾಡಿ, ತುಮಕೂರು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರದ್ದು ಜಾತ್ಯತೀತ ಮನಸ್ಥಿತಿ, ಅವರು ಯಾವತ್ತೂ ಜಾತಿಯತೆ ಮಾಡಿಲ್ಲ, ಎಲ್ಲಾ ಜಾತಿ ವರ್ಗದವರನ್ನು ಸಮಾನವಾಗಿ ಪ್ರೀತಿಸುವ, ಅಭಿವೃದ್ಧಿಯ ದೂರದೃಷ್ಠಿ ಹೊಂದಿರುವ ನಾಯಕ. ಸೋಮಣ್ಣ ಅವರನ್ನು ಈ ಬಾರಿ ಗೆಲ್ಲಿಸಿದರೆ ತುಮಕೂರು ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದು ಎಂದರು.
ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಓಂಕಾರ್, ಕೊರಟಗೆರೆ ಪರಾಜಿತ ಅಭ್ಯರ್ಥಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‍ಕುಮಾರ್ ಮಾತನಾಡಿದರು. ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಎಚ್.ಎ.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಆಂಜನಮೂರ್ತಿ, ನಗರ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಹನುಮಂತಪ್ಪ, ವೆಂಕಟೇಶ್, ನಟರಾಜು ಭಾಗವಹಿಸಿದ್ದರು.
