ಕೋಲಾರ: ಕಾಂಗ್ರೆಸ್ ಪಕ್ಷದಲ್ಲಿ ಮನೆ ಒಂದು, ನೂರು ಬಾಗಿಲಾಗಿದೆ. ಎಡಗೈ, ಬಲಗೈ, ಮುಂದೆ, ಹಿಂದೆ ಎಂದು ಒಂದು ತಿಂಗಳಿನಿಂದ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಗಲಾಟೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಶಾಸಕರು, ಎಂಎಲ್ಸಿಗಳು ರಾಜೀನಾಮೆ ಕೊಡುವುದು ಅವರ ಆಂತರಿಕ ವಿಚಾರ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಕ್ಷೇತ್ರಕ್ಕೆ 3 ತಿಂಗಳಿಂದ ಟಿಕೆಟ್ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ದೇಶ, ಧರ್ಮಕ್ಕಾಗಿ ಜನ ತ್ಯಾಗ, ಬಲಿದಾನ ಮಾಡಿದ ಲಕ್ಷಾಂತರ ಮಂದಿ ಇರುವ ಬಿಜೆಪಿ, ಜನಸಂಘದವರ ಮುಂದೆ ನಾನೇನು ಅಲ್ಲ. ಎನ್ ಡಿಎ ಮೈತ್ರಿಕೂಟದಲ್ಲಿ ಯಾರಿಗೇ ನೀಡಲಿ ಕೆಲಸ ಮಾಡಿ ಗೆಲ್ಲಿಸಲು ಪಣ ತೊಡುತ್ತೇನೆ. ಅಮಿತ್ ಶಾಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ಇದೆ. ನಡ್ಡಾ ಅವರೂ ಮಾತನಾಡಿದ್ದಾರೆ. ಟಿಕೆಟ್ ವಿಚಾರವಾಗಿ ನನ್ನ ತಪ್ಪಿದ್ದರೆ ಹೇಳಿ ಎಂದು ನಾನೂ ಕೇಳಿದೆ. ಸರ್ವೇ ಪ್ರಕಾರ ನನ್ನ ಗೆಲುವು ಇತ್ತು. ಆದ್ರೂ ಮೈತ್ರಿ ಕಾರಣದಿಂದ ಒಪ್ಪಿದ್ದು, ಹತಾಶರಾಗದೆ ಕೆಲಸ ಮಾಡಲು ಪಣ ತೊಟ್ಟಿದ್ದೇನೆ.
ಬಿಬಿಎಂಪಿ ಸದಸ್ಯನಾಗಿದ್ದ ನನ್ನನ್ನು ಮೊದಲ ಬಾರಿಗೆ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಕೋಲಾರ ನನ್ನ ಕರ್ಮಭೂಮಿಯಾಗಿದೆ. ನಾನು ಬಾಡಿಗೆಗೆ ಬಂದಿಲ್ಲ. ಎಲ್ಲಿಯೂ ಹೋಗಲ್ಲ. ಇಲ್ಲೇ ಇರುತ್ತೇನೆ. ನಾನು ಎನ್ ಡಿಎ ಮೈತ್ರಿಯ ಆಕಾಂಕ್ಷಿಯಲ್ಲ. ಪಕ್ಷೇತರ ಅಭ್ಯರ್ಥಿ ಆಗಿಯೂಲ್ಲ. ನನಗಿನ್ನೂ ವಯಸ್ಸಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಜೆಡಿಎಸ್, ಬಿಜೆಪಿಯವರೊಂದಿಗೆ ಸಮನ್ವಯ ಸಭೆ ನಡೆಸಿ ಪ್ರತಿ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಂತೆ ತಿಳಿಸಿದರು.

