ಪ್ರತಿನಿಧಿ ವರದಿ ಪಾಂಡವಪುರ
ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡದೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ಜನರು ಮರೆತಿಲ್ಲ. ಆದರೆ ಮೋದಿ ನೇತೃತ್ವದ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೆ ಸಂಬಂಧಿಸಿದ ಪ್ರಮುಖ 5 ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿ ಮಾಡಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾ ಭವನದಲ್ಲಿ ಮಂಡ್ಯ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಬೆಂಬಲಿಸಿ, ಪಾಂಡವಪುರ ತಾಲೂಕು ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.
ಮುಂಬಯಿ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕುತಂತ್ರದಿಂದ ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ಜಾಗ ಕೊಡದ ಕಾಂಗ್ರೆಸ್ ಪಕ್ಷ, ನೆಹರು ಕುಟುಂಬಕ್ಕೆ ಹೇಗೆ ಎಕರೆಗಟ್ಟಲೆ ಜಾಗ ನೀಡಲಾಯಿತು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ ಏಕೆ, ಭಾರತ ರತ್ನ ಪ್ರಶಸ್ತಿಗೆ ಕೊರಳೊಡಿದ್ದು ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯರಾಮ್ ಮಾತನಾಡಿ, ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಏಕೈಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ದಲಿತ ಸಮುದಾಯದವರು ಕುಮಾರಸ್ವಾಮಿ ಪರವಾಗಿದ್ದೇವೆ. ಜಿಲ್ಲೆಯಲ್ಲಿ ದಲಿತರು ಒಗ್ಗಟ್ಟಾಗಿ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದರು.
ಮಾಜಿ ಸಚಿವರಾದ ಆಲ್ಕೋಡ್ ಹನುಮಂತಪ್ಪ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಎಚ್.ಮಂಜುನಾಥ್, ಕನಗನಮರಡಿ ಬೊಮ್ಮರಾಜು, ಪುರಸಭೆ ಮಾಜಿ ಅಧ್ಯಕ್ಷೆ ಅರ್ಚನಾ ಚಂದ್ರು, ಜೆಡಿಎಸ್ ಪಾಂಡವಪುರ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ವಕೀಲ ಕಣಿವೆ ಯೋಗೇಶ್, ಪುರಸಭೆ ಸದಸ್ಯ ಶಿವಕುಮಾರ್, ಪಾಪಯ್ಯ, ಶ್ವೇತ, ಅಲ್ಪಹಳ್ಳಿ ಗೋವಿಂದಯ್ಯ, ಪ್ರಶಾಂತ್ ಸೇರಿದಂತೆ ಅನೇಕರಿದ್ದರು.


