– ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಪ್ರತಿಭಟನೆ
ಪ್ರತಿನಿಧಿ ವರದಿ ಮೈಸೂರು
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಮೋದಿ ಪರ ಜೈಕಾರ ಕೂಗುತ್ತಾ ಸಚಿವ ಶಿವರಾಜ್ ತಂಗಡಗಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪ್ರಧಾನಿಯವರ ಬಗ್ಗೆ ಹೀನ ಪದಗಳನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಇದು ಸಚಿವ ತಂಗಡಗಿಯವರಿಂದ ಬಂದ ಹೇಳಿಕೆಯಲ್ಲ. ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ? ಎಂಬ ಅವರ ಹೇಳಿಕೆ ಕಾಂಗ್ರೆಸ್‌ನವರ ಮನಸ್ಥಿತಿ ಮತ್ತು ಹತಾಶೆ ತೋರಿಸುತ್ತದೆ ಎಂದು ಕಿಡಿಕಾರಿದರು.
ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನಾಚಿಕೆಗೇಡಿತನದಿಂದ ಕೂಡಿದ್ದು, ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ದೇಶದ ಪ್ರಧಾನಿ ಕುರಿತು ಅಗೌರವದಿಂದ ಮಾತನಾಡಿರುವ ಇಂತಹವರು ಸಚಿವ ಸ್ಥಾನದಲ್ಲಿರಲು ಅನರ್ಹರು. ತಂಗಡಗಿ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿರುವ ದೂರು ದಾಖಲಾಗಬೇಕು. ಕೂಡಲೇ ಅವರು ಕ್ಷಮೆ ಕೋರಬೇಕು. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಮುಖಂಡರಾದ ಗಿರಿಧರ್, ಜೋಗಿಮಂಜು, ಕಿರಣ್‌ಗೌಡ, ರೋಹಿತ್, ಸಚಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
==============

