ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಂಬಂಧ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಸಮಯವಾದ್ದರಿಂದ ಕುಡಿಯುವ ನೀರಿನ ಪೂರೈಕೆಗೆ ಮುತುವರ್ಜಿ ವಹಿಸಬೇಕಿದೆ. ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ವೇಳೆಗೆ ಪೂರ್ಣವಾಗಬೇಕು. ಜನರಿಗೆ ತುರ್ತಾಗಿ ನೀರು ಒದಗಿಸಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ತಹಸೀಲ್ದಾರರು, ತಾಪಂ ಇಒಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ ಮುಖ್ಯಾಧಿಕಾರಿಗಳು ಭೇಟಿ ಕೊಟ್ಟು ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ, ಎಸಿ ಎಂ.ಶಿವಮೂರ್ತಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಮಧುಸೂಧನ್, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ತಹಸೀಲ್ದಾರರು, ತಾಒಂ ಇಒಗಳು ಇದ್ದರು.

