ಬೆಂಗಳೂರು, ಜ.03: ಹುಬ್ಬಳ್ಳಿಯಲ್ಲಿ ಗಲಭೆ ಆರೋಪಿ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ (BJP Protest) ನಡೆಸ್ತಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸ್ತಿದ್ದಾರೆ. ಇನ್ನು ಇದೇ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ. ಇದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು. ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಬಿಟ್ಟು ಜವಾಬ್ದಾರಿಯುತ ಕಾರ್ಯ ನಿರ್ವಹಿಸಿ ಎಂದು ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ನಾಲ್ಕುವರೆ ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ.
