ಆತ್ಮ ವಿಶ್ವಾಸವೇ ಗೆಲುವಿನ ಮೂಲ । ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಯ ಹಸ್ತ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಇಂದಿನಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲು ಜಿಲ್ಲೆಯ 6,517 ವಿದ್ಯಾರ್ಥಿಗಳು ಸನ್ನದ್ಧರಾಗಿದ್ದಾರೆ.
ಜಿಲ್ಲಾಡಳಿತ ಸೂಕ್ತ ಮೂಲ ಸೌಕರ್ಯದೊಂದಿಗೆ ಕಾರ್ಯೋನ್ಮುಖವಾಗಿದ್ದು, ಪಾರದರ್ಶಕ ಮತ್ತು ಸುಗಮವಾಗಿ ಪರೀಕ್ಷೆ ನಡೆಸಲು ಸಿದ್ದತೆ ಪೂರ್ಣಗೊಂಡಿದೆ. ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸೂಕ್ತ ಬಂದೋಬಸ್ತ್ ನಡೆಸಲಾಗಿದೆ. ಕೇಂದ್ರದ 200 ಮೀಟರ್ ನಿರ್ಬಂಧಿತ ಪ್ರದೇಶವಾಗಿ ಕ್ರಮಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಯಾವ ರೀತಿ ಮುಂಜಾಗೃತೆ ಅವಶ್ಯ ಎಂಬುವುದುನ್ನು ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 6 ರವರೆಗೆ ನಡೆಯಲಿರುವ ಪರೀಕ್ಷೆಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಾಗಿದೆ.
ಪರೀಕ್ಷೆ ಕೇಂದ್ರಗಳಲ್ಲಿ ಸೂಕ್ತವಾದ ಪೀಠೋಪಕರಣ, ಆಸನದ ವ್ಯವಸ್ಥೆ, ಕುಡಿಯಲು ಶುದ್ಧವಾದ ನೀರು, ಪರೀಕ್ಷಾ ದಿನಗಳಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು, ಪ್ರವೇಶ ಪತ್ರ ತೋರಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಭಯಪಡಿಸದಂತೆ ಗೊಂದಲವಿಲ್ಲದೆ ಪಾರದರ್ಶಕವಾಗಿ ಸುಗಮವಾಗಿ ಪರೀಕ್ಷೆ ನಡೆಸಲು ಸಿದ್ದತೆ ಪೂರ್ಣಗೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್, ಆರೋಗ್ಯ ಸೇವೆ, ಡಯಟ್ ಹಿರಿಯ ಉಪನ್ಯಾಸಕರ ಜಾಗೃತಿ ದಳ ರಚಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವುದು, ವೆಬ್‌ಕಾಸ್ಟ್ ಮಾಡಲಾಗುತ್ತದೆ.
6,517 ವಿದ್ಯಾರ್ಥಿಗಳು ; ಜಿಲ್ಲೆಯ 171 ಪ್ರೌಢಶಾಲೆಯ 6,517 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 3,340 ಬಾಲಕರು, 3,177 ಬಾಲಕಿಯರು ಇದ್ದಾರೆ. ಮಡಿಕೇರಿ ತಾಲ್ಲೂಕಿನ 43, ಸೋಮವಾರಪೇಟೆ ತಾಲ್ಲೂಕಿನ 71 ಮತ್ತು ವಿರಾಜಪೇಟೆ ತಾಲ್ಲೂಕಿನ 57 ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರಗಳು ; ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢಶಾಲೆ, ಸಂತ ಜೋಸೆಫ್, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಮೂರ್ನಾಡು ಪ್ರೌಢಶಾಲೆ, ಸಿದ್ದಾಪುರ ಪ್ರೌಢಶಾಲೆ, ಸಂಪಾಜೆ ಪ್ರೌಢಶಾಲೆ, ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಒಎಲ್‌ವಿ ಆಂಗ್ಲ ಮಾಧ್ಯಮ ಶಾಲೆ, ಕುಶಾಲನಗರ ಫಾತಿಮಾ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಸೇಕ್ರೇಡ್ ಹಾರ್ಟ್ ಪ್ರೌಢಶಾಲೆ, ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೇರೀಸ್ ಪ್ರೌಢಶಾಲೆ, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆ, ಹೆಬ್ಬಾಲೆ ಪದವಿ ಪೂರ್ವ ಕಾಲೇಜು, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಅನ್ನಮ್ಮ ಪ್ರೌಢಶಾಲೆ, ಅಮ್ಮತ್ತಿ ಗುಡ್ ಸೆಫರ್ಡ್ ಶಾಲೆ, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ, ಗೋಣಿಕೊಪ್ಪ ಸಂತ ಥಾಮಸ್ ಶಾಲೆ, ತಿತಿಮತಿ ಸರ್ಕಾರಿ ಪ್ರೌಢಶಾಲೆ, ಪೊನ್ನಂಪೇಟೆ ಪಬ್ಲಿಕ್ ಶಾಲೆ, ಶ್ರೀಮಂಗಲ ಪದವಿ ಪೂರ್ವ ಕಾಲೇಜು.
ಪರೀಕ್ಷೆಯನ್ನು ಹಬ್ಬವಾಗಿ ಸ್ವೀಕರಿಸಿಕೊಂಡು ಹೆದರದೆ, ಧೃತಿಗೆಡದಂತೆ ಬರೆಯಬೇಕಿದೆ. ಕಲಿತದನ್ನು ಬರೆಯುತ್ತೇನೆ ಎಂಬ ಆತ್ಮಸ್ಥೈರ್ಯ ಮುಖ್ಯ. ಕೊಠಡಿಯಲ್ಲಿ ಅತ್ತ, ಇತ್ತ ನೋಡಿಕೊಂಡು ಸಮಯ ಕಳೆಯುವುದಕ್ಕಿಂತ, ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಆಗ, ಆತ್ವವಿಶ್ವಾಸ ವೃದ್ದಿಸಿ ಕಷ್ಟದ ಉತ್ತರಗಳು ಕೂಡ ಬರೆಯಲು ಸಾಧ್ಯವಾಗಲಿದೆ.
ಪ್ರೊ. ಮುಂಡ್ಯೋಳಂಡ ಡಿ. ನಂಜುಂಡ, ಶಿಕ್ಷಣ ತಜ್ಞರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಕಾಪ್ಸ್
ದೇವರ ಮೇಲೆ ನಂಬಿಕೆ ಮುಖ್ಯ. ಬುದ್ದಿವಂತನಾಗಿ ಸೃಷ್ಠಿಸಿರುವ ದೇವರು, ಪರೀಕ್ಷೆ ಚೆನ್ನಾಗಿ ಬರೆಯಲು ಶಕ್ತಿ ನೀಡಬಲ್ಲ. ಕಲಿತ ಶಿಕ್ಷಣವನ್ನು ಬರೆಯಲು ಶ್ರಮ ಮುಖ್ಯ. ದೇವರ ಮೇಲಿನ ನಂಬಿಕೆ, ಶಿಸ್ತು, ಯಶಸ್ಸಿನ ದಾರಿಯಾಗಲಿದೆ.
ಡಾ. ಶಾಂತಿ ಅಚ್ಚಪ್ಪ, ಮುಖ್ಯಸ್ಥೆ, ನ್ಯಾಷನಲ್ ಅಕಾಡೆಮಿ ಸ್ಕೂಲ್, ಅತ್ತೂರು, ಗೋಣಿಕೊಪ್ಪ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶನದಂತೆ ಎಸ್‌ಒಪಿ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಿದೆ. ಪರೀಕ್ಷೆಯ ಪಾವಿತ್ರö್ಯತೆ ಕಾಪಾಡುವುದು ಅತೀ ಮುಖ್ಯವಾಗಿದೆ.
ವೆಂಕಟ್ ರಾಜಾ, ಜಿಲ್ಲಾಧಿಕಾರಿ.
ಪರೀಕ್ಷಾ ಕೇಂದ್ರ ಹೊಸ ವಾತಾವರಣ, ಹೇಗೆ ಎಂಬ ಗೊಂದಲ ಬೇಡ. ವಿದ್ಯಾರ್ಥಿಗಳಿಗೆ ಪೂರಕವಾಗಿ ಕೇಂದ್ರದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಗುರಿ ಉತ್ತರ ಬರೆಯುವ ಬಗ್ಗೆ ಮಾತ್ರ ಕೇಂದ್ರೀಕೃತವಾಗಿರಲಿ. ಆತಂಕ, ದುಗುಡ ಬೇಡ. ಉತ್ತರ ಬರೆಯಲು ಆದ್ಯತೆ ಕಲ್ಪಿಸಿಕೊಳ್ಳಿ. ಶುಭವಾಗಲಿ.
– ಹರೀಶ್ ತಮನಕರ್, ಪ್ರಾಂಶುಪಾಲರು, ವಿದ್ಯಾನಿಕೇತನ ಕಾಲೇಜು, ರ‍್ವತೊಕ್ಲು.
ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಶೈಕ್ಷಣಿಕ ಜೀವನದ ಹಂತದಲ್ಲಿ ಕಠಿಣ ಪ್ರಯತ್ನ ಮಾಡಿದಾಗ ಭವಿಷ್ಯ ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಪೂರಕ ಸಿದ್ಧತೆ ಮುಖ್ಯ. ಭಯ, ಒತ್ತಡ ಸಾಮಾನ್ಯ. ವೇಳಾಪಟ್ಟಿ ತಯ್ಯಾರಿಸಿ ಓದುವುದನ್ನು ರೂಢಿಸಿಕೊಳ್ಳಬೇಕು. ಹಳೇ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆಯ್ದುಕೊಂಡು ಸರಿಯಾದ ಅಭ್ಯಾಸ ಮಾಡಬೇಕು.
– ಕೆ. ಸಿ. ತನ್ವೀರ್, ಪ್ರಾಂಶುಪಾಲರು, ರಾಫಲ್ಸ್ ಇಂಟರ್ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿಯು ಕಾಲೇಜು, ಹೊದವಾಡ, ನಾಪೋಕ್ಲು.
ಶಿಕ್ಷಕರು ಪ್ರಾರಂಭದಿಂದಲೇ ವಿದ್ಯಾರ್ಥಿಗಳಿಗೆ ಮುಂಬರುವ ಪರೀಕ್ಷೆಯನ್ನು ಯಾವುದೇ ಭಯ, ಆತಂಕವಿಲ್ಲದೆ ಸುಲಭ ರೀತಿಯಲ್ಲಿ ಬರೆಯುವ ಮಾರ್ಗ ದರ್ಶನವನ್ನು ಹೆಜ್ಜೆ ಹೆಜ್ಜೆಗೆ ನೀಡುತ್ತಾ ಬಂದಿರುವುದರಿಂದ ಸಂತೋಷದಿಂದ ಬರೆಯುತ್ತಾರೆ. ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದ ಕೂಡಲೇ ಮೊದಲಿಗೆ ಒಮ್ಮೆ ಪ್ರಶ್ನೆ ಪತ್ರಿಕೆಯನ್ನು ಓದಿ ಗ್ರಹಿಸಿಕೊಂಡು ಸರಿಯಾಗಿ ಗೊತ್ತಿರುವ ಉತ್ತರವನ್ನು ಬರೆದ ನಂತರ ಯೋಚಿಸಿ ಬರೆಯುವತ್ತ ಗಮನಹರಿಸಬೇಕು ಸಮಯ ಪ್ರಜ್ಞೆ ಮುಖ್ಯ.-
ಬಿ. ಎಂ. ಶಾರದಾ, ಪ್ರಾಂಶುಪಾಲರು, ಶ್ರೀರಾಮ್ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ನಾಪೋಕ್ಲು.
ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೆ ಗಮನ ವಹಿಸುವುದು. ಹಾಲ್ ಟಿಕೆಟ್ ಪೆನ್ನುಗಳು, ಪೆನ್ಸಿಲ್‌ಗಳು, ಸ್ಕೇಲ್ ಅಗತ್ಯ ಸಾಮಗ್ರಿಗಳನ್ನು ಜೋಪಾನವಾಗಿ ತರುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಗೊಂದಲವಿಲ್ಲದೆ ಪರೀಕ್ಷೆ ಬರೆಯಲು ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು.
– ಪಿ. ಬಿ. ಸುನಿಲ್, ಶಿಕ್ಷಕ, ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ
ಶಾಲೆ, ನಾಪೋಕ್ಲು.
ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಪಾತ, ಪೋಷಕರ ಶ್ರಮ ಕೂಡ ಇದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯ. ಓದುವಾಗ ಪೋಷಕರು ಸಹ ಜತೆಯಲ್ಲೇ ಕುಳಿತುಕೊಂಡು ಮಗುವಿನ ಬೇಕು-ಬೇಡಿಕೆಗಳ ಬಗ್ಗೆ ವಹಿಸಬೇಕು. ಮಗುವಿಗೆ ಮಾನಸಿಕ ಧೈರ್ಯ ಮತ್ತು ಮತ್ತು ನನ್ನ ಪೋಷಕರು ಸಹ ನನಗಾಗಿ ಸಮಯ ನೀಡುತ್ತಾರೆಂದು ತಿಳಿದು ಮತ್ತಷ್ಟು ಓದುವಲ್ಲಿ ಆಸಕ್ತಿ ತೊರುತ್ತಾರೆ. – ಸಿ. ಎಂ. ತಿಮ್ಮಯ್ಯ, ಮುಖ್ಯ ಶಿಕ್ಷಕರು, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್
ಆಂಗ್ಲ ಮಾಧ್ಯಮ ಶಾಲೆ, ಬೇತು, ನಾಪೋಕ್ಲು
ವಿದ್ಯಾರ್ಥಿಗಳು ಭಯ, ಆತಂಕ ಪಡದೆ ಎಲ್ಲಾ ಪರೀಕ್ಷೆಗಳನ್ನು ಹಬ್ಬದ ರೀತಿಯಲ್ಲಿ ಎದುರಿಸಬೇಕಿದೆ. ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ, ಹೆಚ್ಚು ನೀರು ಕುಡಿಯುವುದು ಸೂಕ್ತ, ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ, ತೀರಾ ನಿದ್ದೆಗೆಟ್ಟು ಓದದೆ ಆರೋಗ್ಯದ ದೃಷ್ಟಿಯಿಂದ ಕನಿಷ್ಠ ನಿದ್ರೆಗೆ ಒತ್ತು ಕೊಡಬೇಕಿದೆ.
– ಕೆ. ಎಂ. ಶರತ್ ಮೊಣ್ಣಪ್ಪ, ಸಹ ಶಿಕ್ಷಕ, ಕಕ್ಕಬ್ಬೆ ಪ್ರೌಡಶಾಲೆ
ಫೋಟೋ 24 ಎಂಡಿಕೆ 01 ; ಮುಂಡ್ಯೋಳಂಡ ಡಿ. ನಂಜುಂಡ
02 ; ಡಾ. ಶಾಂತಿ ಅಚ್ಚಪ್ಪ,
03 ; ವೆಂಕಟ್ ರಾಜಾ,
04 ; ಹರೀಶ್ ತಮಾನಕರ್,
05 ; ಕೆ. ಸಿ. ತನ್ವೀರ್,
06 ; ಬಿ. ಎಂ. ಶಾರದಾ
07 ; ಪಿ. ಬಿ. ಸುನಿಲ್,
08; ಸಿ. ಎಂ. ತಿಮ್ಮಯ್ಯ,
09 ; ಕೆ. ಎಂ. ಶರತ್ ಮೊಣ್ಣಪ್ಪ
10 ; ಪೊನ್ನಂಪೇಟೆ ಪಬ್ಲಿಕ್ ಶಾಲೆ

