ಮೈಸೂರು: ದಸರಾ ಮಹೋತ್ಸವದ ವಿಶೇಷ ಆಕರ್ಷಣೆಗಳಲ್ಲಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಚಂದ್ರಯಾನ-3 ರೂಪುಗೊಳ್ಳಲಿದೆ.
ಪ್ರದರ್ಶನ ನಡೆಯಲಿರುವ ಕುಪ್ಪಣ್ಣ ಪಾರ್ಕಿನಲ್ಲಿರುವ ಗಾಜಿನ ಅರಮನೆಯಲ್ಲಿ ಕೋಲ್ಕತ್ತಾದ 3 ಲಕ್ಷ ಸೇವಂತಿ ಹೂವಿನಿಂದ ರಾಕೆಟ್ ಹಾಗೂ ಪ್ರಜ್ಞಾನ್ ರೋವರ್ನೊಂದಿಗೆ ‘ಚಂದ್ರಯಾನ-3’ ನಿರ್ಮಾಣವಾಗಲಿದೆ.
ಕೋಲ್ಕತ್ತಾ ಸೇವಂತಿ:
ಇಲ್ಲಿನ ಗಾಜಿನ ಮನೆಯಲ್ಲಿ ಪ್ರತಿ ವರ್ಷವೂ ಒಂದೊಂದು ಆಕೃತಿಗಳು ಹೂವಿನಿಂದಲೇ ಅರಳುವುದು ವಿಶೇಷ. ಈ ಬಾರಿ ಚಂದ್ರಯಾನದ ಮಾದರಿಯನ್ನು ನಿರ್ಮಿಸಲು ಕೋಲ್ಕತ್ತಾದ ಸೇವಂತಿ ಹೂವನ್ನೇ ಬಳಸಲಾಗುತ್ತಿದೆ. ಹೆಚ್ಚು ದಿನ ತಾಜಾತನ ಕಾಪಾಡಿಕೊಳ್ಳುವ ಏಕೈಕ ಕಾರಣದಿಂದ ಕೋಲ್ಕತ್ತಾದ ಸೇವಂತಿ ಹೂವಿನಿಂದ ಚಂದ್ರಯಾನ ಆಕೃತಿ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಮೈದಳೆಯಲಿದೆ. 3 ಲಕ್ಷ ಕೋಲ್ಕತ್ತಾ ಸೇವಂತಿ ಹೂ ಬಳಕೆಯಾಗಲಿದ್ದು, ಬಿಳಿ ಬಣ್ಣದ ಹೂವಿನಿಂದ ಚಂದ್ರಯಾನದ ದೃಶ್ಯ ಬಿಂಬಿಸಲಾಗುತ್ತದೆ. ಅದರ ಪಕ್ಕ 18 ಅಡಿ ಎತ್ತರದ ರಾಕೆಟ್, ಪ್ರಜ್ಞಾನ್ ರೋವರ್ ಲ್ಯಾಂಡ್ ಆಗಿರುವಂತೆ ಹೂವುಗಳಿಂದಲೇ ರೂಪುಗೊಳಿಸಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.
ಪಂಚ ಗ್ಯಾರಂಟಿ:
ಈ ಬಾರಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ದಿನವನ್ನು ಎಲ್ಲೆಡೆ ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಿಸಿ ದಾಖಲೆ ಬರೆದ ಹಿನ್ನೆಲೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಿಧಾನ ಪೀಠಿಕೆಯುಳ್ಳ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಹೂವಿನ ಕಲಾಕೃತಿಗಳಲ್ಲಿ ನಿರ್ಮಿಸಲಾಗುತ್ತಿದೆ.
ಗೆದ್ದು ಬಾ ಇಂಡಿಯಾ:
ಭಾರತ ಆತಿಥ್ಯ ವಹಿಸಿರುವ 13 ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅ.5ರಿಂದ ನ.19ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ‘ಗೆದ್ದು ಬಾ ಇಂಡಿಯಾ’ ಶೀರ್ಷಿಕೆಯಡಿ ಹೂವಿನಿಂದಲೇ ಕ್ರಿಕೆಟ್ ಬ್ಯಾಟ್, ಬಾಲ್, ವಿಕೆಟ್ಗಳು ಸೇರಿದಂತೆ ಕೆಲ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ.
20 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ:
ಫಲಪುಷ್ಪ ಪ್ರದರ್ಶನ ಹೆಬ್ಬಾಗಿಲಿನ ಬಳಿ ಈ ಬಾರಿ 20 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿಯನ್ನು ಹೂವಿನಿಂದಲೇ ನಿರ್ಮಿಸಲಾಗುತ್ತದೆ. ಪ್ರದರ್ಶನ ವೀಕ್ಷಣೆಗೆ ಬರುವ ಪ್ರವಾಸಿಗರಲ್ಲಿ ಚಾಮುಂಡೇಶ್ವರಿ ಮೂರ್ತಿ ಭಕ್ತಿಯನ್ನು ಇಮ್ಮಡಿಗೊಳಿಸಲಿದೆ.
- ಜಾಹೀರಾತು -
ತೋಟಗಾರಿಕಾ ಇಲಾಖೆ ಹಾಗೂ ತೋಟಗಾರಿಕಾ ಸಂಘದ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ 1.35 ಕೋಟಿ ರೂ.ಗೆ ಫಲಪುಷ್ಪ ಪ್ರದರ್ಶನದ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅಂತಿಮವಾಗಲಿದೆ.
ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಚಂದ್ರಯಾನ, ಸರಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ನಾನಾ ಆಕರ್ಷಕ ಮಾದರಿಗಳನ್ನು ಹೂಗಳಿಂದಲೇ ನಿರ್ಮಿಸಲಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಮಂಜುನಾಥ್ ತಂಗಡಿ ಹೇಳಿದ್ದಾರೆ.