ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಈವರೆಗೂ 33 ಮಂದಿಯನ್ನು ಬಂಧಿಸಿದ್ದೇವೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಡಿಗನತ್ತ ಗ್ರಾಮದಲ್ಲಿ ಗ್ರಾಮದಲ್ಲಿ ಒಂದು KSRP ತುಕಡಿ, ಡಿಎಆರ್ ತುಕಡಿ ನಿಯೋಜನೆ ಮಾಡುವ ಮೂಲಕ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಿದ ಚುನಾವಣಾ ಅಧಿಕಾರಿಗಳು ಸೋಮವಾರ ಮರು ಮತದಾನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ರೊಚ್ಚಿಗೆದ್ದ ಹಾಡಿಯ ಮಂದಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ಬೀಸಿ ಇವಿಎಂ ವಿವಿಪ್ಯಾಟ್ನ ಧ್ವಂಸ ಮಾಡಿ ಹಾಕಿದ್ದರು. ಈ ಹಿನ್ನಲೆ ಸೋಮವಾರ ಇಂಡಿಗನತ್ತ 146 ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಸಿದ್ದತೆ ನಡೆಸಲಾಗಿದೆ.
ಇನ್ನು ನಿನ್ನೆ ಗಲಾಟೆ ಗದ್ದಲವಾಗಿ ಇವಿಎಂ ಮಷಿನ್ ಧ್ವಂಸ ಮಾಡಿದ ಬೆನ್ನಲ್ಲೆ ಕೇಂದ್ರ ಚುನಾವಣಾ ಆಯೋಗಕ್ಕೆ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ವರದಿ ನೀಡಿತ್ತು. ವರದಿ ಹಾಗೂ ಎಫ್ಐಆರ್ ಕಾಪಿ ಸ್ವೀಕರಿಸಿದ ಕೇಂದ್ರ ಚುನಾವಣಾ ಆಯೋಗ ಸೋಮವಾರ ಮರು ಮತದಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನಲೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆಯೊಂದಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಜತೆ ಮರು ಮತದಾನಕ್ಕೆ ಸಿದ್ದತೆ ನಡೆಸಿದೆ.
