ಜನವರಿ 22ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನೆರವೇರಲಿದ್ದು ಈ ದಿನಕ್ಕಾಗಿ ಹಿಂದೂ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಟಾಪನೆಗೆ ಮೈಸೂರಿನ ಶಿಲ್ಫಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿ ಆಯ್ಕೆಯಾಗಿದ್ದು ಸ್ವಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಅರುಣ್ ಯೋಗಿ ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿ ಆಯ್ಕೆಯಾಗಿರುವ ಹಿನ್ನೆಲೆ, ಅರುಣ್ ಯೋಗಿರಾಜ್ ಅವರ ಸ್ವಗ್ರಾಮ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಶಿಲ್ಪಿ ಅರುಣ್ ಯೋಗಿರಾಜ್ ಜೊತೆ ಮಾವ ಚಲುವರಾಜ್ ಅವರು ಸಹ ರಾಮನಮೂರ್ತಿ ಕೆತ್ತನೆಯಲ್ಲಿ ಭಾಗಿಯಾಗಿದ್ದರು. ಆರು ತಿಂಗಳು ಅರುಣ್ ಯೋಗಿ ಜೊತೆ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಕೆತ್ತನೆಯಲ್ಲಿ ಭಾಗಿಯಾಗಿದ್ದರು. ಇದೀಗ ಅರುಣ್ ಯೋಗಿ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.
