ಕಾವೇರಿ ನದಿ ಒಡಲು ಸೇರುತ್ತಿರುವ ಕೊಳ್ಳೇಗಾಲದ ಚರಂಡಿಗಳ ತ್ಯಾಜ್ಯ ನೀರು | ಪರಿಸರ ಸಂರಕ್ಷಿಸದ ಅಧಿಕಾರಿ ವರ್ಗ
ಚಿಕ್ಕಮಾಳಿಗೆ ಕೊಳ್ಳೇಗಾಲ
ದಾಸನಪುರ ಬಳಿ ಕಾವೇರಿ ನದಿಗೆ ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ ವಿವಿಧ ಬಡಾವಣೆಗಳ ಚರಂಡಿಯ ತ್ಯಾಜ್ಯ ನೀರು ನಿತ್ಯ ಎಗ್ಗಿಲ್ಲದೆ ಸೇರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ನಿಯಂತ್ರಿಸದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ನಗರಸಭಾ ವ್ಯಾಪ್ತಿಯ 31 ವಾರ್ಡ್ ಪೈಕಿ 20ಕ್ಕೂ ಹೆಚ್ಚು ಬಡಾವಣೆಗಳ ಚರಂಡಿಯ ಕೊಳಚೆ ನೀರು ಸೇರಿದಂತೆ ಶೌಚಗೃಹಗಳ ತ್ಯಾಜ್ಯ ನೀರು ನೇರವಾಗಿ ಕುಪ್ಪಮ್ಮ ಕಾಲುವೆ ಮೂಲಕ ಹರಿದು ಕೊಳ್ಳೇಗಾಲದಿಂದ ಕೇವಲ 3 ಕಿ.ಮೀಟರ್ ಅಂತರದಲ್ಲಿರುವ ಕಾವೇರಿ ನದಿ ಒಡಲು ಸೇರಿ ಅನೈರ್ಮಲ್ಯಕ್ಕೆ ಎಡೆ ಮಾಡಿಕೊಟ್ಟಿದ್ದು, ಕೋಟ್ಯಾಂತರ ಜನರ ಪಾಲಿನ ಪವಿತ್ರ ಪಾವನ ಕಾವೇರಿ ನೀರು ಕಲುಷಿತಗೊಳ್ಳುತ್ತಿದೆ.
- ಜಾಹೀರಾತು -
ಕೊಳ್ಳೇಗಾಲ ನಗರಸಭೆಯ 31 ವಾರ್ಡ್ ಸರಿ ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಈ ವಾರ್ಡ್‌ಗಳಿಂದ ನಿತ್ಯ ಹೊರ ಬೀಳುವ ಚರಂಡಿ ತ್ಯಾಜ್ಯ ನೀರನ್ನು ನಗರಸಭಾ ಆಡಳಿತ ಒಂದೆಡೆ ತಡೆದು ಶುದ್ಧಿಕರಿಸುವ ಕೆಲಸ ಮಾಡುತ್ತಿಲ್ಲ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿಲ್ಲ. ಬದಲಾಗಿ, ಮನ ಬಂದಂತೆ ಉಪ್ಪಾರಮೋಳೆ ಬಡಾವಣೆ ಬಳಿಯ ಕುಪ್ಪಮ್ಮ ಕಾಲುವೆ ಮೂಲಕ ಹರಿ ಬಿಟ್ಟು ಅದು ಕಾವೇರಿ ನದಿ ಸೇರುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ.
ಕುಪ್ಪಮ್ಮ ಕಾಲುವೆ ಮೂಲಕ ಸಾಗುವ ಚರಂಡಿ ತ್ಯಾಜ್ಯ ನೀರು ಕಾವೇರಿ ನದಿಗೆ ಹೊಂದಿಕೊಂಡಿರುವ ಹಳೇ ಅಣಗಳ್ಳಿ ಗ್ರಾಮದ ಜಮೀನುಗಳ ಕೊಲ್ಲಿ ಸೇರಿ ನಂತರ ದಾಸನಪುರ ಬಳಿಯಲ್ಲಿ ಕಾವೇರಿ ನದಿ ಒಡಲನ್ನು ಬೆರೆಯುತ್ತಿದೆ. ಇದೆಲ್ಲದರ ಬಗ್ಗೆ ನಗರಸಭಾ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜಾಣ ಮೌನವಹಿಸಿರುವುದು ಸಾರ್ವಜನಿಕ ವಲಯ ಹಾಗೂ ಪರಿಸರ ಪ್ರೇಮಿಗಳಲ್ಲಿ ಆಕ್ರೋಶ ತರಿಸಿದೆ.
ತ್ಯಾಜ್ಯದಿಂದ ಜಲಚರಗಳ ಮಾರಣ ಹೋಮ: ಕೊಲ್ಲಿಯಲ್ಲಿ ಸಾಗುವ ತ್ಯಾಜ್ಯ ನೀರು ಕೊನೆಗೆ ದಾಸನಪುರ ಗ್ರಾಮದ ಗಿರಿನಾಯಕ ಮತ್ತು ಹರಳೆ ಗ್ರಾಮದ ಮಾದೇಗೌಡ ಎಂಬುವವರ ಜಮೀನಿನ ಮಧ್ಯಭಾಗದಲ್ಲಿ ತನ್ನ ಕೊಳಕನ್ನು ನೇರವಾಗಿ ಕಾವೇರಿ ನದಿಗೆ ಚಾಚಿಕೊಳ್ಳುತ್ತಿದೆ. ಪರಿಣಾಮ, ನದಿಯಲ್ಲಿರುವ ಜಲ, ಚರಗಳ ಮಾರಣಹೋಮವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ನಗರಸಭಾ ಅಧಿಕಾರಿಗಳು ತ್ಯಾಜ್ಯ ನೀರನ್ನು ವೈಜಾನಿಕ ರೀತಿಯಲ್ಲಿ ಶುದ್ಧಿಕರಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂಬುದೇ ದುರಂತದ ಸಂಗತಿ.
ಪರಿಸರ ಸಂರಕ್ಷಣೆ ಕಾಯ್ದೆ ಅನ್ವಯ ತ್ಯಾಜ್ಯ ನೀರನ್ನು ಎಲ್ಲಿಯೂ ನದಿಗೆ ಬಿಡಲು ಅವಕಾಶವಿಲ್ಲ ಎಂಬುದು ಎಲ್ಲರಿಗೆ ತಿಳಿದ ವಿಷಯವೇ ಆದರೂ, ಅದು ಕೇವಲ ಸರ್ಕಾರಿ ಆದೇಶ ಮತ್ತು ಪುಸ್ತಕಕ್ಕೆ ಸೀಮಿತ ಎಂಬಂತೆ ವರ್ತಿಸುತ್ತಿರುವ ನಗರಸಭೆಯ ಅಧಿಕಾರಿ ವರ್ಗ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಮಾಡುವಲ್ಲಿ ಮೈಮರೆತಿದೆ. ಮಾತ್ರವಲ್ಲದೇ, ಸರ್ಕಾರಕ್ಕೆ ಮಾತ್ರ ಯಾವುದೇ ಪರಿಸರ ಹಾನಿಯಾಗುತ್ತಿಲ್ಲ. ಎಲ್ಲವೂ ಸರಿಯಾಗಿದೆ ಎಂಬ ಅಸತ್ಯದ ವರದಿಯನ್ನು ಜಿಲ್ಲಾಡಳಿತದ ಮೂಲಕ ನೀಡುತ್ತಿದೆ. ಅದೇ ನಿಜವೆಂದು ತಿಳಿದಿರುವ ಜಿಲ್ಲಾಡಳಿತ ಒಮ್ಮೆಯೂ ನೈಜ್ಯತೆಯ ಪರಿಶೀಲನಾ ಕ್ರಮಗಳನ್ನು ಅನುಸರಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಡಿಸಿ, ಎಸಿ ಎಚ್ಚರತಪ್ಪದಿರಲಿ: ಈ ನಡುವೆ ದೇವರ ವರವೋ, ಪುಣ್ಯದ ಫಲವೋ ಎಂಬಂತೆ ಕೊಳ್ಳೇಗಾಲ ನಗರಸಭೆಗೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಆಡಳಿತಾಧಿಕಾರಿಯಾಗಿದ್ದಾರೆ. ಅಂತೆಯೇ, ಪ್ರಭಾರ ಪೌರಾಯುಕ್ತರಾಗಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರು ಇತ್ತೀಚೆಗೆ ನೇಮಕಗೊಂಡಿದ್ದಾರೆ. ಜಿಲ್ಲೆಯ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಮುಖ್ಯ ಪಾತ್ರದಲ್ಲಿರುವ ಇಂತಹ ಪ್ರಭಾವಿ ಅಧಿಕಾರಿಗಳು ನಗರಸಭೆಯ ಚುಕ್ಕಾಣಿ ಹಿಡಿದಿರುವಾಗಲಾದರೂ ಕಾವೇರಿ ನದಿಗೆ ನಗರಸಭೆಯ ವಿವಿಧ ಬಡಾವಣೆಗಳ ಚರಂಡಿಯ ತ್ಯಾಜ್ಯ ನೀರು ಸೇರಿ ಕಲುಷಿತಗೊಳಿಸುತ್ತಿರುವುದನ್ನು ತಪ್ಪಿಸಲು ಶರವೇಗದ ಕ್ರಮವಹಿಸುವರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ನದಿಯಿಂದಲೇ ಜನರಿಗೆ ನೀರು ಪೂರೈಕೆ: ವಿಪರ್ಯಾಸವೆಂದರೆ, ನಗರಸಭೆಯ ವಿವಿಧ ವಾರ್ಡ್‌ಗಳ ಚರಂಡಿಯ ತ್ಯಾಜ್ಯ ನೀರನ್ನು ಇತ್ತ ಕಾವೇರಿ ನದಿಗೆ ಹರಿಸುವ ಜಾಣ ಕುರುಡು ಅಧಿಕಾರಿಗಳು, ನಂತರ ಅದೇ ನದಿಯಿಂದ ನೀರನ್ನು ಕೊಳ್ಳೇಗಾಲಕ್ಕೆ ತಂದು ಶುದ್ಧಿಕರಿಸಿ ಜನರಿಗೆ ನೀಡುತ್ತಿದ್ದಾರೆ. ಆದರೆ, ಅದೇ ರೀತಿ ನಗರದ ತ್ಯಾಜ್ಯ ನೀರನ್ನು ನದಿಗೆ ಬಿಡುವ ಮುನ್ನ ಶುದ್ಧಿಕರಿಸಬೇಕು. ಇಲ್ಲವೇ ಶುದ್ಧಿಕರಿಸಿದ ನೀರನ್ನು ರೈತರ ಜಮೀನುಗಳಿಗೆ ಹರಿಸಿ ಪುಣ್ಯ ಕಟ್ಟಿಕೊಳ್ಳಬೇಕು ಎಂಬ ಪರಿಕಲ್ಪನೆಯೇ ಇಲ್ಲದಿರುವುದು ದುರಂತವೇ ಸರಿ.
ಕೋಟ್:
ಕೊಳ್ಳೇಗಾಲ ನಗರಸಭೆಯ ಚರಂಡಿಯ ತ್ಯಾಜ್ಯ ನೀರು ಕಾವೇರಿ ನದಿ ಸೇರುತ್ತಿರುವ ಬಗ್ಗೆ ತಿಳಿದಿರಲಿಲ್ಲ. ಈ ಬಗ್ಗೆ ನಗರಸಭೆಯ ತಾಂತ್ರಿಕ ಹಾಗೂ ಪರಿಸರ ಇಂಜಿನಿರ್ಸ್ ಜತೆಗೂಡಿ ಶೀಘ್ರವೇ ಸ್ಥಳ ಪರಿಶೀಲಿಸುತ್ತೇನೆ ಹಾಗೂ ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಿಸುವ ಕುರಿತು ಸಮಾಲೋಚಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮವಹಿಸಲಾಗುವುದು.-ಬಿ.ಆರ್.ಮಹೇಶ್, ಪ್ರಭಾರ ಪೌರಾಯುಕ್ತ, ಕೊಳ್ಳೇಗಾಲ ನಗರಸಭೆ