*ದೊಡ್ಡ ಕವಲಂದೆಯಲ್ಲಿ ಎಚ್.ಸಿ. ಮಹದೇವಪ್ಪ ವಾಗ್ದಾಳಿ
ಪ್ರತಿನಿಧಿ ವರದಿ ನಂಜನಗೂಡು
ಬಿಜೆಪಿ ಧರ್ಮ- ಧರ್ಮಗಳ ನಡುವೆ ಅಪನಂಬಿಕೆಯನ್ನು ಮೂಡಿಸಿ, ಮನು ವಾದವನ್ನು ಸೃಷ್ಟಿಸಿ, ಕಂದಕ ನಿರ್ಮಾಣ ಮಾಡಿ, ಸಮಾಜವನ್ನು ಒಡೆಯುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ ವಾಗ್ದಾಳಿಯನ್ನು ನಡೆಸಿದರು.
ತಾಲೂಕಿನ ದೊಡ್ಡಕವಲಂದೆ ಗ್ರಾಮದ ರೋಡ್ ಶೋನಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಸಂವಿಧಾನ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅನೇಕ ಧರ್ಮ, ಭಾಷೆ, ಆಚಾರ ವಿಚಾರ, ಉಡುಗೆ -ತೊಡುಗೆ, ಆಹಾರ ಪದ್ಧತಿಗಳು ವಿಭಿನ್ನವಾಗಿದ್ದರೂ ನಾವೆಲ್ಲ ಒಂದೇ ಭಾರತೀಯರು. ಆದರೆ ಬಿಜೆಪಿ 10 ವರ್ಷ ಅಧಿಕಾರ ಮಾಡಿ, ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವ ತೋರದೆ, ನಾವು ಹೇಳಿದ್ದಂತೆ ಕೇಳಬೇಕು. ನಾವು ಹೇಳಿದ ಬಟ್ಟೆ ಹಾಕಬೇಕು. ನಾವು ಹೇಳಿದ ಆಹಾರ ತಿನ್ನಬೇಕು ಎಂದು ಹೇಳಿ ಸಂವಿಧಾನವನ್ನು ಮೂಲೆಗುಂಪು ಮಾಡಿ ಕೋಮುವಾದದ ಹುಣ್ಣಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಎ ಜಾರಿಗೆ ತಂದಿರೋದು ಮೊದಲು ಅಲ್ಪಸಂಖ್ಯಾತರು, ನಂತರ ದಲಿತರು, ಹಿಂದುಳಿದ ವರ್ಗದವರನ್ನು ಗುಲಾಮರನ್ನಾಗಿ ಮಾಡಿ, ಮತ್ತೆ ಮನುವಾದವನ್ನು ಜಾರಿಗೆ ತರುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವ ಇಲ್ಲದೆ ಇದ್ದಲ್ಲಿ ನಾವೆಲ್ಲರೂ ಪ್ರಾಣಿ ಪಕ್ಷಿಗಳ ರೀತಿ ಬದುಕನ್ನು ಸಾಗಿಸಬೇಕಾಗುತ್ತದೆ ಎಂದರು.
ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಾದ ಹೆಡಿಯಾಲ, ಹುರ, ಹುಲ್ಲಹಳ್ಳಿ, ಹೆಡೆತಲೆ, ಹೆಮ್ಮರಗಾಲ, ಕಳಲೆ, ಬದನವಾಳು, ನೇರಳೆ, ಬಳಿಕ ದೊಡ್ಡಕವಲಂದೆ ಗ್ರಾಮದಲ್ಲಿ ಪುತ್ರ ಸುನಿಲ್ ಬೋಸ್ ಪರ ರೋಡ್ ಶೋ ನಡೆಸಿ ಮತವನ್ನು ಕೇಳಿದರು.
ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎಸ್. ಸಿ. ಬಸವರಾಜು, ಇಂಧನ್ ಬಾಬು, ಲತಾ ಸಿದ್ದಶೆಟ್ಟಿ, ದೊರೆಸ್ವಾಮಿ ನಾಯಕ, ಮಾರುತಿ, ಕುರಹಟ್ಟಿ ಮಹೇಶ್, ಅಳಗಂಚಿ ಮಹೇಶ್, ಬುಲೆಟ್ ಮಹಾದೇವಪ್ಪ, ನಾಗೇಶ್ ರಾಜು, ಕವಲಂದೆಯ ಕಲೀಲ್, ಅಜಾಮುಲ್ಲಾಖಾನ್, ನಸ್ರುಲ್ಲಕಾನ್, ರಾಹುಲ್, ಎಂ. ಮಹಾದೇವಯ್ಯ, ಗುರುಪಾದಪ್ಪ, ಹೊನ್ನಪ್ಪ, ಸಿದ್ದಲಿಂಗಪ್ಪ, ಸ್ವಾಮಿ, ಕೃಷ್ಣ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
