ಬೆಂಗಳೂರು ಉಪನಗರ ರೈಲು ಯೋಜನೆ (Bengaluru Suburban Rail Project) ಅಥವಾ ಸಬ್ಅರ್ಬನ್ ಯೋಜನೆಯ ಕಾಮಗಾರಿಗೆ ತುಸು ವೇಗ ದೊರೆತಿದ್ದು, ಕಾರಿಡಾರ್- 2 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 31 ಮೀ ಉದ್ದದ ಯು ಗರ್ಡರ್ (U Girder) ಅಳವಡಿಕೆಗೆ ಸಿದ್ಧತೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಮೆಟ್ರೋದಲ್ಲಿ 28 ಮೀ. ಉದ್ದದ ಗರ್ಡರ್ ತಯಾರಿಸಿ ಅಳವಡಿಕೆ ಮಾಡಲಾಗ್ತಿತ್ತು. ಆದರೆ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗುತ್ತಿದೆ.
ಯು ಗರ್ಡರ್ ಅಳವಡಿಕೆ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ದೇವನಹಳ್ಳಿಯಲ್ಲಿರುವ ಕಾಸ್ಟಿಂಗ್ ಯಾರ್ಡ್ನಲ್ಲಿ ಅತಿ ಉದ್ದದ ಯುಗಾರ್ಡ್ ಸಿದ್ಧಪಡಿಸಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಮಲ್ಲಿಗೆ ಲೈನ್ನಲ್ಲಿ ಅಗತ್ಯವಾಗಿವೆ. ಇದನ್ನು ತಯಾರಿಸಿ ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
