ಪ್ರತಿನಿಧಿ ವರದಿ ಮಾಲೂರು
ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಸಾರ್ವಜನಿಕ ಸೇವೆ, ಜೀವನ ಸಮರ್ಪಣೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ತಹಸೀಲ್ದಾರ್ ಕೆ.ರಮೇಶ್ ಹೇಳಿದರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ಜಗಜೀವನ್ ರಾಮ್ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಪಟ್ಟಣದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಾಬು ಜಗಜೀವನರಾಮ್ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಪ್ರಸ್ತುತ ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ. ಅಂತಹ ನಾಯಕರ ಆರ್ದಶ, ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಶಿವಕುಮಾರ್, ಉಪ ತಹಸೀಲ್ದಾರ್ ಹರಿಪ್ರಸಾದ್, ಎಲ್.ಬಾಬು, ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಕೆ.ಅಶ್ವಥಪ್ಪ, ಅಧಿಕಾರಿಗಳಾದ ಅನಿತಾ, ರಾಹುಲ್, ಚಂದ್ರು, ಹುಳದೇನಹಳ್ಳಿ ರಾಜು, ರಾಜಣ್ಣ, ಗುರು ಪ್ರಸಾದ್, ಸಂತೇಹಳ್ಳಿ ರವಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

